

ನರೇಗಲ್ಲ: ಶ್ರಾವಣ ಮಾಸದ ಒಂದು ತಿಂಗಳು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಅಮೃತ (ಸಿಹಿ) ಭೋಜನಕ್ಕೆ ವ್ಯವಸ್ಥೆ ಮಾಡಿರುವ ಶಾಲೆಯ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದು ಪಪಂ ಮಾಜಿ ಸದಸ್ಯ ಶಶಿಧರ ಸಂಕನಗೌಡ್ರ ಹೇಳಿದರು.
ಪಟ್ಟಣದ ಕೆ.ಜಿ.ಎಂ.ಎಸ್ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರಾವಣ ಮಾಸದ ನಿಮಿತ್ತ ಒಂದು ತಿಂಗಳು ಅಮೃತ(ಸಿಹಿ) ಭೋಜನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಹಾಗೂ ಪೋಷಕರ ಪಾತ್ರ ಹೆಚ್ಚಿದೆ. ಪ್ರತಿಯೊಬ್ಬರಿಗೂ ಉಚಿತ ಶಿಕ್ಷಣ ಸಿಗಲು ಸರ್ಕಾರಿ ಶಾಲೆಗಳನ್ನು ಉಳಿಸಿ ಅಭಿವೃದ್ಧಿ ಪಡಿಸಬೇಕು. ಬಿಸಿಯೂಟದ ಜತೆಗೆ ವರ್ಷದಲ್ಲಿ ಒಂದು ತಿಂಗಳ ಶ್ರಾವಣ ಮಾಸದಲ್ಲಿ ಪ್ರತಿದಿನ ಒಬ್ಬ ದಾನಿಗಳ ಮೂಲಕ ಸಿಹಿ ಊಟ ನೀಡುವ ಶ್ರಾವಣ ಮಾಸದ ಅಮೃತ ಭೋಜನ ಕಾರ್ಯಕ್ರಮ ಅತ್ಯುತ್ತಮವಾಗಿದೆ ಎಂದರು.
ನರೇಗಲ್ಲ ಕಾನಿಪ ಸಂಘದ ಅಧ್ಯಕ್ಷ ಆದರ್ಶ ಕುಲಕರ್ಣಿ ಮಾತನಾಡಿ, ಜೀವನದಲ್ಲಿ ಯಶಸ್ಸು ಕಾಣಬೇಕೆಂದರೆ ಅದಕ್ಕೆ ಶಿಕ್ಷಣವೊಂದೇ ತಳಹದಿ. ಸರ್ಕಾರಿ ಶಾಲೆಯಲ್ಲಿ ಶೇ. 80 ರಷ್ಟು ಬಡ ಮಕ್ಕಳು ಇದ್ದಾರೆ. ಮಕ್ಕಳಲ್ಲಿ ಓದುವ ಹವ್ಯಾಸದ ಜತೆಗೆ ವಿವಿಧ ತರಹದ ಸಿಹಿ ಭೋಜನವನ್ನು ಶ್ರಾವಣ ಮಾಸದ ನಿಮಿತ್ತ ಅಮೃತ ಭೋಜನ ಯೋಜನೆ ಮಾಡಿರುವ ಮುಖ್ಯಶಿಕ್ಷಕರ ಹಾಗೂ ಶಿಕ್ಷಕರ ಅಭೂತಪೂರ್ವ ಕಾರ್ಯವಾಗಿದೆ ಎಂದರು.
ಮುಖ್ಯಶಿಕ್ಷಕ ಬಸವರಾಜ ಕುರಿ ಮಾತನಾಡಿದರು. ಅಮೃತ ಭೋಜನ ವ್ಯವಸ್ಥೆ ಮಾಡಿಸಿದ ದಾನಿ ಶಶಿಧರ ಸಂಕನಗೌಡ್ರ ಅವರನ್ನು ಸನ್ಮಾನಿಸಲಾಯಿತು. ಎಸ್ಡಿಎಂಸಿ ಸದಸ್ಯ ಅಂದಾನಗೌಡ ಲಕ್ಕನಗೌಡ್ರ, ಈಶ್ವರ ಬೆಟಗೇರಿ, ಚಂದ್ರು ರಾಠೋಡ, ಎನ್.ಎಲ್. ಚವ್ಹಾಣ, ಎಂ.ಪಿ. ಅಣಗೌಡರ, ಡಿ.ವಿ. ಕಳ್ಳಿ, ಜೆ.ಎ. ಪಾಟೀಲ, ಎಂ.ಎಸ್. ಮಾಳಶೆಟ್ಟಿ, ಎಸ್.ಐ. ಜಗಾಪೂರ, ರಾಜೇಶ್ವರಿ ತೊಂಡಿಹಾಳ ಇದ್ದರು.