ಪೊಲೀಸರ ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ

24-GPT-2B
ಗುಂಡ್ಲುಪೇಟೆ ತಾಲೂಕಿನ ದೊಡ್ಡತುಪ್ಪೂರು ಗೇಟ್ ಸಮೀಪ 112 ಪೊಲೀಸರು ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿಸುತ್ತಿರುವುದು. ಪ್ರಕಾಶ್, ಹೊರೆಯಾಲ ಮಹದೇವಸ್ವಾಮಿ, ತಂಗರಾಜು ಹಾಗೂ ಮಹೇಶ್ ಇದ್ದರು.
Published on

ಗುಂಡ್ಲುಪೇಟೆ: ತಾಲೂಕಿನ ದೊಡ್ಡತುಪ್ಪೂರು ಗೇಟ್ ಸಮೀಪದ ರಸ್ತೆಯಲ್ಲಿನ ಗುಂಡಿಗಳನ್ನು ಪೊಲೀಸರು ಮುಚ್ಚಿಸಿದ್ದು, ವಾಹನ ಸವಾರರಿಗೆ ಆಗುತ್ತಿದ್ದ ಅನನುಕೂಲ ತಪ್ಪಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ತಾಲೂಕಿನಿಂದ ಜಿಲ್ಲಾ ಕೇಂದ್ರವನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ ದೊಡ್ಡ ಗುಂಡಿಗಳಿವೆ. ಲೋಕೋಪಯೋಗಿ ಇಲಾಖೆ ಇವುಗಳ ಪ್ಯಾಚ್ ವರ್ಕ್ ಕಾಮಗಾರಿ ಕೈಗೊಂಡಿದ್ದರೂ ಅಧಿಕ ತೂಕದ ಕಲ್ಲು ಸಾಗಿಸುವ ವಾಹನಗಳ ಸಂಚಾರದಿಂದಾಗಿ ಪ್ರತಿ ದಿನವೂ ಗುಂಡಿಗಳು ನಿರ್ಮಾಣವಾಗಿ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ತೊಂದರೆಯಾಗಿತ್ತು.

ಈ ನಡುವೆ ಆರು ತಿಂಗಳ ಹಿಂದೆ ಇದರ ರಿಪೇರಿ ಕಾಮಗಾರಿಗೆ ಟೆಂಡರ್ ಆಗಿದ್ದರೂ ವಿಧಾನಸಭಾ ಚುನಾವಣೆ ಕಾರಣದಿಂದ ಮುಂದೂಡಲಾಗಿತ್ತು. ಆದರೆ ಹೊಸ ಸರ್ಕಾರ ಅಧಿಕಾರಕ್ಕೆ ಬಂದರೂ ಗುತ್ತಿಗೆದಾರ ರಿಪೇರಿ ಕಾಮಗಾರಿ ಕೈಗೊಳ್ಳದ ಪರಿಣಾಮ ವಾಹನ ಸವಾರರು ಪರದಾಡುವಂತಾಗಿತ್ತು. ಜತಗೆ ಈ ಮಾರ್ಗದಲ್ಲಿ ಅಪಘಾತಗಳ ಸಂಖ್ಯೆಯೂ ಹೆಚ್ಚಾಗಿತ್ತು. ಸ್ವಲ್ಪ ಮಳೆಬಿದ್ದರೂ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುತ್ತಿತ್ತು. ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಎದುರಾಗುವ ಗುಂಡಿಗಳ ಬಗ್ಗೆ ಅರಿವಿಲ್ಲದ ದ್ವಿಚಕ್ರ ವಾಹನಗಳ ಸವಾರರು ಬಿದ್ದು ಮೂ ೆಮುರಿದುಕೊಳ್ಳುತ್ತಿದ್ದರು.. ವೇಗವಾಗಿ ಬಂದ ಕಾರುಗಳು ಹಠಾತ್ತನೆ ಎದುರಾಗುವ ಗುಂಡಿ ತಪ್ಪಿಸಲು ಹೋಗಿ ಅಪಘಾತಕ್ಕೊಳಗಾಗುತ್ತಿತ್ತು.

ಪ್ರತಿ ದಿನವೂ ಇದನ್ನು ನೋಡಿ ಬೇಸತ್ತಿದ್ದ 112 ಪೊಲೀಸರು ಭಾನುವಾರ ಖುದ್ದಾಗಿ ನಿಂತು ಗುಂಡಿಗಳನ್ನು ಮುಚ್ಚಿಸಿದರು. ಸಹಾಯಕ ಸಬ್ ಇನ್ಸ್‌ಪೆಕ್ಟರ್‌ಗಳಾದ ಪ್ರಕಾಶ್ ಹಾಗೂ ಹೊರೆಯಾಲ ಮಹದೇವಸ್ವಾಮಿ ಜೆಸಿಬಿ ಮಾಲೀಕ ತಂಗರಾಜು ಅವರಿಗೆ ಕರೆ ಮಾಡಿ ಸ್ಥಳಕ್ಕೆ ವಾಹನ ಕರೆಸಿದರು. ಎರಡೂ ಕಡೆ ಸಂಚರಿಸುವ ವಾಹನಗಳನ್ನು ನಿಯಂತ್ರಿಸಿ ರಸ್ತೆ ಬದಿಯಲ್ಲಿದ್ದ ಕಲ್ಲು ಮತ್ತು ಮಣ್ಣನ್ನು ಗುಂಡಿಗಳಿಗೆ ಮುಚ್ಚಿಸಿ ಸಮತಟ್ಟು ಮಾಡಿಸುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿದರು.

ಈ ಸಂದರ್ಭದಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಸರ್ಕಾರ ಮಾಡಬೇಕಾದ ಕೆಲಸವನ್ನು ಪೊಲೀಸರು ಮಾಡಿದ್ದಕ್ಕೆ ಮೆಚ್ಚುಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net