

ನರೇಗಲ್ಲ: ಶ್ರಾವಣಮಾಸದ ನಿಮಿತ್ತ ಅಮೃತ ಭೋಜನ ಯೋಜನೆಯಡಿ ಸಿಹಿ ಊಟ ನೀಡುತ್ತಿರುವುದು ಶ್ಲಾಘನೀಯ ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಸರ್ಕಾರಿ ಹಿರಿಯ ಶಾಲೆಯಲ್ಲಿ ಬುಧವಾರ ಶ್ರಾವಣಮಾಸದ ನಿಮಿತ್ತ ಅಮೃತ ಭೋಜನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಜೀವನದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಹಂತದಲ್ಲಿ ಕಲಿಕೆಯ ಘಟ್ಟ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳಿಗೆ ದೇಶಾಭಿಮಾನ, ಸಮಯಪ್ರಜ್ಞೆಯ ಬಗ್ಗೆ ವಿದ್ಯಾರ್ಥಿ ಹಂತದಲ್ಲಿಯೇ ಪ್ರೇರಣೆ ಸಿಗಬೇಕು. ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು, ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಬೇಕು. ರಾಜ್ಯ ಸರ್ಕಾರವು ಕೂಡ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ, ಮಕ್ಕಳಿಗೆ ಉಚಿತ ಸೌಲಭ್ಯಗಳನ್ನು ನೀಡುತ್ತಿದೆ ಎಂದರು.
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎ. ರಡ್ಡೇರ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಹಾಗೂ ಪೋಷಕರ ಪಾತ್ರ ಹೆಚ್ಚಿದೆ. ಪ್ರತಿಯೊಬ್ಬರಿಗೂ ಉಚಿತ ಶಿಕ್ಷಣ ಸಿಗಲು ಸರ್ಕಾರಿ ಶಾಲೆಗಳನ್ನು ಉಳಿಸಿ ಅಭಿವೃದ್ಧಿ ಪಡಿಸಬೇಕು ಎಂದರು.