

ಮಂಡ್ಯ: ಪಿಇಎಸ್ ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಿ.ಶ್ರೀನಿವಾಸ್ ಉತ್ತಮ ವಾಗ್ಮಿ. ಎಲ್ಲರ ಸ್ನೇಹ ಪಡೆದಿರುವ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿ. ಶಿಕ್ಷಕ ಹೇಗಿರಬೇಕೆನ್ನುವುದನ್ನು ಇವರನ್ನು ನೋಡಿ ಕಲಿಯಬೇಕಿದೆ. ಕೆ.ಟಿ.ವೀರಪ್ಪ, ಡಾ.ರಾಗೌ ಸೇರಿದಂತೆ ಹಲವು ಮಹನೀಯರ ಶಿಕ್ಷಕ ವರ್ಗವೇ ಇದೆ. ಆದರೆ ಇದೆಲ್ಲ ಇನ್ನೂ ಇತಿಹಾಸ ಆಗುತ್ತದೆ ವಿನಃ ನಿಮ್ಮಂತಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಬರುತ್ತಿಲ್ಲ ಎಂದು ಮೈಸೂರು ವಿವಿ ನಿವೃತ್ತ ಕುಲಪತಿ ಕೆ.ಎಸ್.ರಂಗಪ್ಪ ಹೇಳಿದರು.
ನಗರದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಡಿ.ಶ್ರೀನಿವಾಸ್ ಅಭಿನಂದನಾ ಸಮಿತಿ, ಕರ್ನಾಟಕ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಡಿ.ಶ್ರೀನಿವಾಸ್-85 ಸ್ನೇಹಶೀಲ’ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ವಿಜ್ಞಾನ ಬೆಳೆದಂತೆ ವ್ಯಕ್ತಿತ್ವ ಎನ್ನುವುದು ಬಹುತೇಕರಲ್ಲಿ ಕಡಿಮೆ ಆಗುತ್ತಿದೆ. ಅಂತೆಯೇ ಓದುಗರ ಸಂಖ್ಯೆಯೂ ಇಳಿಕೆಯಾಗಿದೆ. ಇದಕ್ಕೆ ಕಾರಣ ಹುಡುಕಿದರೆ ಉತ್ತಮ ಶಿಕ್ಷಕರಾಗಲೀ ಅಥವಾ ವಿದ್ಯಾರ್ಥಿಗಳಾಗಲಿ ಸಿಗದಿರುವುದು ಎಂದರು.
ಪ್ರಸ್ತುತದಲ್ಲಿ ಜಾತಿ ವ್ಯವಸ್ಥೆ ಹೆಚ್ಚಾಗಿದೆ. ಶೈಕ್ಷಣಿಕ ವಲಯದಲ್ಲಿಯೂ ತಾರತಮ್ಯ ನೋಡುವಂತಾಗಿದೆ. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದ ಸ್ಥಿತಿಗೆ ನಾವು ತಲುಪಿರುವುದು ದುರಂತ. ಮುಂದಿನ ಪೀಳಿಗೆಗೆ ಹಿರಿಯ ಶಿಕ್ಷಕರು ಮತ್ತು ಉಪನ್ಯಾಸಕರ ಸಲಹೆ ಸೂಚನೆಗಳು ಬೇಕು. ಸಂಪ್ರದಾಯ ಉಳಿಯುವಂತಹ ಕೆಲಸವನ್ನು ಮಾಡಬೇಕು. ವಿಜ್ಞಾನವು ಮುಂದುವರಿದಿದೆ. ಆದರೆ, ಜ್ಞಾನ ಮತ್ತು ಪರಿಸ್ಥಿತಿ ಹದಗೆಡುತ್ತಿದೆ. ಇದಕ್ಕೆ ಅವಕಾಶ ನೀಡದೇ ಸರಿ ಮಾಡಿಕೊಂಡು ಹೋಗುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿ, ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಯಾರದೋ ಚಾಡಿ ಮಾತನ್ನು ಕೇಳುತ್ತಿರಲಿಲ್ಲ. ವ್ಯಕ್ತಿಯಲ್ಲಿನ ಪ್ರತಿಭೆಯನ್ನು ಗುರುತಿಸಿ ಬೆನ್ನು ತಟ್ಟುವ ಕೆಲಸ ಮಾಡುವ ಗುಣ ಹೊಂದಿದ್ದ ಡಿ.ಶ್ರೀನಿವಾಸ್ ಅವರು ಪ್ರೇರಣೆಯಾಗಿದ್ದಾರೆ. ಇವರ ಬಗ್ಗೆ ಪುಸ್ತಕದಲ್ಲಿ ದಾಖಲು ಮಾಡಿರುವುದರಿಂದ ಅವರನ್ನು ಓದಿಕೊಳ್ಳಲು ಸಹಾಯವಾಗುತ್ತದೆ. ಶ್ರೀನಿವಾಸ್ ಎಂದಿಗೂ ಚಟಗಳಿಗೆ ದಾಸರಾಗಿರಲಿಲ್ಲ. ಕೆಲವು ಮೇಷ್ಟ್ರುಗಳು ಪಾಠಕ್ಕೆ ಸೀಮಿತರಾಗಿರುತ್ತಾರೆ. ಆದರೆ ಶ್ರೀನಿವಾಸ್ ಅವರು ನಮ್ಮೆಲರಿಗೂ ಆದರ್ಶವಾಗಿದ್ಧಾರೆ ಎಂದು ಶ್ಲಾಸಿದರು.
ಮಾಜಿ ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜಾನಪದ ಪರಿಷತ್ ಮಾಜಿ ಅಧ್ಯಕ್ಷ ಟಿ.ತಿಮ್ಮೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ಎಂ.ನಾಗರಾಜು ಇದ್ದರು.