

ಚಿಕ್ಕಮಗಳೂರು: ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪದವಿ ಪೂರೈಸಿದ ಶಿಕ್ಷಕರನ್ನು ಸೇವಾ ಜ್ಯೇಷ್ಠತೆಯೊಂದಿಗೆ ಪದವೀಧರ ಶಿಕ್ಷಕರೆಂದು ಪರಿಗಣಿಸಬೇಕೆಂದು ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಎಸ್.ಪರಮೇಶ್ವರಪ್ಪ ನೇತೃತ್ವದಲ್ಲಿ ಡಿಡಿಪಿಐ ಮಲ್ಲೇಶಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಪರಮೇಶ್ವರಪ್ಪ ಮಾತನಾಡಿ, ಹೊಸ ನೀತಿ ಪ್ರಕಾರ ಶೇ.75 ಹೊಸ ನೇಮಕಾತಿ ಮಾಡಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರಿಗೆ ಶೇ.25ರಷ್ಟು ಪ್ರಮಾಣ ಎನ್ನುವ ಸರ್ಕಾರದ ನೀತಿ ಬದಲಾಗಬೇಕು. ಸೇವಾ ಜ್ಯೇಷ್ಠತೆ ಕಾಪಾಡಿಕೊಂಡು 6ರಿಂದ 8 ನೇ ತರಗತಿಗಳಿಗೆ ಪ್ರತ್ಯೇಕ ಮುಖ್ಯ ಶಿಕ್ಷಕರ ಹುದ್ದೆ, ಪ್ರತ್ಯೇಕ ವೇತನ, ಪದವಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಸೇವಾ ಜ್ಯೇಷ್ಠತೆ ಆಧಾರದಲ್ಲಿ ಮೊದಲ ಆದ್ಯತೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ 2 ಸಾವಿರ ಸೇರಿ ರಾಜ್ಯದಲ್ಲಿ 90 ಸಾವಿರ ಪದವೀಧರ ಶಿಕ್ಷಕರಿದ್ದಾರೆ. ಸರ್ಕಾರದ ಹೊಸ ನೇಮಕಾತಿ ಅನ್ವಯ ಪ್ರಸ್ತುತ 1 ರಿಂದ 7ನೇ ತರಗತಿಯರೆಗೆ ಬೋಧಿಸುತ್ತಿರುವ ಪ್ರಾಥಮಿಕವನ್ನು 1ರಿಂದ 5ನೇ ತರಗತಿಗೆ ಸೀಮಿತಗೊಳಿಸುತ್ತಿರುವುದು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಪದವಿ ಪಡೆದ ಶಿಕ್ಷಕರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದರು.
ಜಿಪಿಟಿ ಅರ್ಹತೆ ಹೊಂದಿರುವ ಪಿಎಸ್ಟಿ ಶಿಕ್ಷಕರನ್ನು ಹೆಚ್ಚುವರಿ ಎಂದು ಪರಿಗಣಿಸದೆ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಯಲ್ಲಿಯೇ ಹುದ್ದೆಗೆ ವಿಲೀನಗೊಳಿಸಬೇಕು. ಉಳಿಯುವ ಖಾಲಿ ವಿಷಯವಾರು ಹುದ್ದೆಗಳಿಗೆ ಮರು ಹಂಚಿಕೆ ಮಾಡಬೇಕು. ಹೆಚ್ಚುವರಿ ವಿದ್ಯಾರ್ಹತೆಗೆ ವಿಶೇಷ ವೇತನ ಸೌಲಭ್ಯ, ಅಂಗವಿಕಲ ಶಿಕ್ಷಕರಿಗೆ ಬಡ್ತಿ ಮೀಸಲಾತಿ, ಕೌನ್ಸೆಲಿಂಗ್ನಲ್ಲಿ ಮೊದಲ ಆದ್ಯತೆ ನೀಡಬೇಕು. ಸೇವಾನುಭವ ಪರಿಗಣಿಸಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸದೆ ಜ್ಯೇಷ್ಠತೆ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಜೆ.ಜಗದೀಶ್, ಉಪಾಧ್ಯಕ್ಷ ಬೈರೇಗೌಡ, ಸಂಘಟನಾ ಕಾರ್ಯದರ್ಶಿ ವನಜಾಕ್ಷಿ, ಕಿರಣ್ಕುಮಾರ್, ಗೀತಾ, ಬಸವರಾಜು, ಅಶೋಕ್, ಬಸಪ್ಪ ಇದ್ದರು.