

ದೇವದುರ್ಗ: ನರೇಗಾ ಯೋಜನೆಯಡಿ ತಾಲೂಕಿನ ವಿವಿಧ ಗ್ರಾಪಂಗಳಲ್ಲಿ ಖಾಲಿ ಇರುವ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆ ನೇಮಕಕ್ಕೆ ಏಜೆನ್ಸಿ ಹೊರಡಿಸಿದ್ದ ಆದೇಶ ಗುರುವಾರ ರದ್ದು ಮಾಡಿದೆ. ಆ ಮೂಲಕ ಮೀಸಲಾತಿ ಹಂಚಿಕೆಗೆ ಎದ್ದಿದ್ದ ಗೊಂದಲಗಳಿಗೆ ತೆರೆ ಎಳೆದಿದೆ.
ನರೇಗಾ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ತಾಂತ್ರಿಕ ಸಿಬ್ಬಂದಿಯನ್ನು ನೇಮಕ ಮಾಡಲು ಏಜೆನ್ಸಿ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಒಟ್ಟು 32 ಹುದ್ದೆಗಳಲ್ಲಿ 14 ಹುದ್ದೆಗೆ ಮೀಸಲು ಅನುಸರಿಸಿ ಉಳಿದ 16 ಹುದ್ದೆಗಳಿಗೆ ಮೀಸಲು ಕಲ್ಪಿಸಿಲ್ಲ. ಕೆಲ ಕೆಟಗರಿಗೆ ಅವಕಾಶ ನೀಡದೆ ಮೀಸಲು ನಿಯಮ ಉಲ್ಲಂಘನೆ ಮಾಡಲಾಗಿತ್ತು.
ಸಮಸ್ಯೆ ಕುರಿತು ಸೆ.1ರಂದು ವಿಜಯವಾಣಿ ‘ಮೀಸಲಾತಿ ನಿಯಮ ಉಲ್ಲಂಘನೆ?’ ಶೀರ್ಷಿಕೆಯಡಿ ವರದಿ ಪ್ರಕಟಿಸಿ ಸಮಸ್ಯೆ ಮೇಲೆ ಬೆಳಕು ಚೆಲ್ಲಿತ್ತು. ಈ ವಿಷಯವಾಗಿ ವಿವಿಧ ಸಂಘಟನೆಗಳು ಜಿಪಂ ಸಿಇಒ, ಎಸ್ಟಿ ಶಾಸಕರಿಗೆ ದೂರು ನೀಡಿದ್ದವು. ಇದರಿಂದ ಎಚ್ಚೆತ್ತುಕೊಂಡ ಏಜೆನ್ಸಿ ನೇಮಕಾತಿಗಾಗಿ ಹೊರಡಿಸಿದ್ದ ಪ್ರಕಟಣೆಯನ್ನು ರದ್ದುಮಾಡಿದೆ.
ಇದರಿಂದ ಉದ್ಯೋಗ ಆಕಾಂಕ್ಷಿಗಳಲ್ಲಿ ಮೂಡಿದ್ದ ಆತಂಕ ದೂರವಾಗಿದೆ. ಮೀಸಲು ಸೌಲಭ್ಯ ರೋಸ್ಟರ್ ಪದ್ಧತಿಯಲ್ಲಿ ಹಂಚಿಕೆ ಮಾಡಿ ಮತ್ತೆ ಅರ್ಜಿ ಆಹ್ವಾನಿಸಬೇಕು ಎಂದು ಉದ್ಯೋಗ ಆಕಾಂಕ್ಷಿಗಳು ಒತ್ತಾಯಿಸಿದ್ದಾರೆ.