

ಬೆಂಗಳೂರು : ಪಿಯು ಉಪನ್ಯಾಸಕ ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ನ.20ರಂದು ನೇಮಕಾತಿ ಆದೇಶ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ವಿಚಾರವಾಗಿ ಮಂಗಳವಾರ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆಸಿದರು. ನಂತರ ಮಾತನಾಡಿದ ಅವರು, ನ.20ರಂದು ಮುಖ್ಯಮಂತ್ರಿಗಳು ಸಾಂಕೇತಿಕವಾಗಿ ನೇಮಕಾತಿ ಆದೇಶ ನೀಡಲಿದ್ದಾರೆ. ಕಾಲೇಜುಗಳು ಆರಂಭವಾದ ದಿನದಿಂದ ನೇಮಕಾತಿ ಆದೇಶ ಜಾರಿಗೆ ಬರಲಿದ್ದು, ಅದಕ್ಕೂ ಮೊದಲು ನೂತನ ಉಪನ್ಯಾಸಕರಿಗೆ ಇಲಾಖೆಯ ನಿಯಮಗಳು, ಆಡಳಿತ, ವೃಂದ ಮತ್ತು ನೇಮಕಾತಿ ನಿಯಮಗಳು, ಉಪನ್ಯಾಸಕರ ವೃತ್ತಿ ಧರ್ಮ, ವೃತ್ತಿ ಗೌರವ ಸೇರಿದಂತೆ ಪ್ರೇರಣಾದಾಯಕ ತರಬೇತಿ ಕಾರ್ಯಾಗಾರವನ್ನು ಜಿಲ್ಲೆಗಳಲ್ಲಿ ಇಲ್ಲವೇ ವಿಭಾಗಗಳಲ್ಲಿ ನೀಡಲಾಗುವುದು ಎಂದು ತಿಳಿಸಿದರು.
ಕರೊನಾದಿಂದ ಆರ್ಥಿಕ ಇಲಾಖೆ ಮತ್ತು ಸಿಬ್ಬಂದಿ ಆಡಳಿತ ಸುಧಾರಣಾ ಇಲಾಖೆಗಳ ಆರ್ಥಿಕ ಮಿತವ್ಯಯ ಆದೇಶವಿದ್ದುದರಿಂದ ಹಾಗೂ ಶಾಲಾ ಕಾಲೇಜುಗಳ ಆರಂಭ ಕುರಿತು ಅನಿಶ್ಚಿತತೆ ಹಿನ್ನೆಲೆಯಲ್ಲಿ ಉಪನ್ಯಾಸಕ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲು ಸಾಧ್ಯವಾಗಿರಲಿಲ್ಲ. ಈ ಮಿತವ್ಯಯ ಆದೇಶವಿದ್ದರೂ ಸಹ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಕೌನ್ಸೆಲಿಂಗ್ ನಡೆಸಿ ಸ್ಥಳ ನಿಯುಕ್ತಿಗೆ ಅವಕಾಶ ನೀಡಲಾಗಿತ್ತು. ಇದೀಗ ಆದೇಶ ನೀಡುತ್ತೇವೆಂದರು.
ನ.23ರಿಂದ ವರ್ಗಾವಣಾ ಪ್ರಕ್ರಿಯೆ: ಪಿಯು ಉಪನ್ಯಾಸಕರ ವರ್ಗಾವಣೆಗೆ ಪ್ರಕ್ರಿಯೆ ನ.23ರಿಂದ ಆರಂಭವಾಗಲಿದ್ದು, ಅಂದಿನಿಂದಲೇ ಅರ್ಜಿ ಸಲ್ಲಿಕೆಗೆ ಅವಕಾಶವಾಗಲಿದೆ. ಈ ಬಾರಿ ಉಪನ್ಯಾಸಕರ ಕಡ್ಡಾಯ ಹಾಗೂ ಹೆಚ್ಚುವರಿ ವರ್ಗಾವಣೆ ಇರುವುದಿಲ್ಲ. ಮುಂದಿನ ಅಧಿವೇಶನದಲ್ಲಿ ಪದವಿಪೂರ್ವ ಶಿಕ್ಷಣ ಉಪನ್ಯಾಸಕರ ವರ್ಗಾವಣಾ ನಿಯಂತ್ರಣ ಕಾಯ್ದೆಗೆ ಸಂಪೂರ್ಣ ತಿದ್ದುಪಡಿ ತಂದು, ಉಪನ್ಯಾಸಕ ಸ್ನೇಹಿಯಾದ ವರ್ಗಾವಣಾ ನೀತಿ ನೀತಿ ಜಾರಿಗೊಳಿಸಲಾಗುವುದೆಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಕ ಹುದ್ದೆ ಭರ್ತಿ: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆಗಳನ್ನು ಆದ್ಯತೆ ಮೇರೆಗೆ ಭರ್ತಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ಇತ್ತೀಚೆಗಷ್ಟೇ ಇಲಾಖೆ ಟಿಇಟಿ ಪರೀಕ್ಷೆಗಳನ್ನು ನಡೆಸಿದ್ದು, ವೃಂದ -ನೇಮಕಾತಿ ನಿಯಮಗಳ ತಿದ್ದುಪಡಿಗೂ ಅವಕಾಶ ಕಲ್ಪಿಸಿರುವ ಕಾರಣ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿರುವ ಹೆಚ್ಚು ಖಾಲಿ ಹುದ್ದೆಗಳು ಇರುವುದನ್ನು ಗಮನಿಸಿ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲು ಪ್ರಸ್ತಾವನೆ ಮಂಡಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಪಿಯು ಇಲಾಖೆ ನಿರ್ದೇಶಕಿ ಸ್ನೇಹಲ್, ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಇತರರು ಇದ್ದರು.
ವರ್ಗಾವಣೆಗೆ ಅರ್ಜಿ
ಶಿಕ್ಷಕರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನ.18ರಿಂದ ಆರಂಭವಾಗಲಿದೆ. ಹೊಸದಾಗಿ ಜಾರಿಗೆ ತಂದಿರುವ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ 2020ರ ಮೊದಲ ವರ್ಗಾವಣೆ ಇದಾಗಿದೆ. ಡಿ.31ಕ್ಕೆ ಅಂತಿಮ ಅರ್ಹತಾ ಆದ್ಯತಾ ಪಟ್ಟಿ ಪ್ರಕಟವಾಗಲಿದೆ.