

ನಂಜನಗೂಡು: ಸರ್ಕಾರಿ ಶಾಲೆಗಳ ಉನ್ನತಿಗೆ ನೆರವಾಗಲು ಶಿಕ್ಷಕರ ಕೊರತೆಯಿರುವ ಶಾಲೆಗಳನ್ನು ಗುರ್ತಿಸಿ ಶಿಕ್ಷಕರನ್ನು ನಿಯೋಜಿಸುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಈ ಯೋಜನೆಗೆ ನೆರವಾಗಿದೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ತಿಳಿಸಿದರು.
ನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕಚೇರಿಯಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಸರ್ಕಾರಿ ಶಾಲೆಗಳಿಗೆ ನೇಮಕಗೊಂಡಿರುವ ಗೌರವ ಶಿಕ್ಷಕರಿಗೆ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದರು.
ಜ್ಞಾನದೀಪ ಯೋಜನೆ ಮೂಲಕ ಶಿಕ್ಷಕರನ್ನು ಮುಂಬರುವ ಮಾರ್ಚ್‌ವರೆಗೆ ಆಯ್ದ ಶಾಲೆಗಳಿಗೆ ನಿಯೋಜಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇನ್ನು ಸರ್ಕಾರಿ ಶಾಲೆಗಳಲ್ಲಿಯೂ ಗುಣಮಟ್ಟದ ಶಿಕ್ಷಣ ಲಭ್ಯವಿದ್ದು, ಸರ್ಕಾರಿ ಶಾಲೆಗಳ ಗುಣಮಟ್ಟ ವೃದ್ಧಿಗೆ ಸರ್ಕಾರದೊಂದಿಗೆ ಸಂಘ ಸಂಸ್ಥೆಗಳು ನೆರವಾಗಬೇಕಿದೆ ಎಂದು ತಿಳಿಸಿದರು.
ತಾಲೂಕು ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಜನರ ಧಾರ್ಮಿಕ ಶ್ರದ್ಧೆಯನ್ನು ಗೌರವಿಸುವ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ದೇವಾಲಯಗಳ ಜೀರ್ಣೋದ್ಧಾರ, ಕೆರೆ ಕಟ್ಟೆಗಳ ದುರಸ್ತಿ ಹಾಗೂ ಕೃಷಿ ಚಟುವಟಿಕೆಗಳಿಗೆ ನೆರವಾಗುವ ಮೂಲಕ ಹಳ್ಳಿಗಳ ಉದ್ಧಾರಕ್ಕೆ ಸಹಕಾರ ನೀಡಿದೆ. ಜತೆಗೆ ಕುಡಿತ ಬಿಡಿಸುವ ಶಿಬಿರಗಳನ್ನು ಆಯೋಜಿಸುವ ಮೂಲಕ ಸಾವಿರಾರು ಕುಟುಂಬಗಳ ಪುನಶ್ಚೇತನಕ್ಕೆ ನೆರವಾಗಿದ್ದು, ಇದರೊಂದಿಗೆ ಸರ್ಕಾರಿ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸುವ ಮೂಲಕ ಮಕ್ಕಳ ಭವಿಷ್ಯಕ್ಕೆ ಬೆಳಕಾಗುತ್ತಿದ್ದಾರೆ. ಜ್ಞಾನದೀಪ ಯೋಜನೆ ಮೂಲಕ ಶಿಕ್ಷಕರಾಗಿ ನೇಮಕವಾಗಿರುವ ಶಿಕ್ಷಕರ ಪಾತ್ರ ಮಹತ್ತರವಾಗಿದ್ದು, ಸರ್ಕಾರಿ ಶಾಲಾ ಮಕ್ಕಳ ಬುದ್ಧಿಶಕ್ತಿ ವೃದ್ಧಿಯೊಂದಿಗೆ ಉತ್ತಮ ಸಂಸ್ಕಾರವನ್ನು ರೂಢಿಸಿಕೊಳ್ಳುವಂತೆ ನೋಡಿಕೊಳ್ಳುವ ಮೂಲಕ ತಮ್ಮ ವೃತ್ತಿ ಶ್ರೇಷ್ಠತೆಯನ್ನು ಕಾಪಾಡಿಕೊಳ್ಳಲು ಶಿಕ್ಷಕರು ಮುಂದಾಗಬೇಕು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಕೆ.ಧರ್ಮರಾಜ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವಾಗುವ ಸಲುವಾಗಿ ಎಸ್‌ಕೆಡಿಪಿಆರ್ ಮೂಲಕ ರಾಜ್ಯದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಶಾಲೆಗಳಿಗೆ ಗೌರವ ಶಿಕ್ಷಕರನ್ನು ನಿಯೋಜಿಸಲಾಗಿದೆ. ಕಳೆದ ವರ್ಷ ನಂಜನಗೂಡು ತಾಲೂಕಿನ 7 ಶಾಲೆಗಳಿಗೆ ಗೌರವ ಶಿಕ್ಷಕರನ್ನು ಸಂಸ್ಥೆ ಮೂಲಕ ನೇಮಕ ಮಾಡಲಾಗಿತ್ತು. ಈ ಬಾರಿ ಶಿಕ್ಷಣ ಇಲಾಖೆ ನೀಡಿದ ಮಾಹಿತಿಯನ್ವಯ 15 ಶಾಲೆಗಳಿಗೆ ಗೌರವ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಜ್ಞಾನದೀಪ ಯೋಜನೆ ಮೂಲಕ ನೇಮಕಗೊಂಡಿರುವ ಶಿಕ್ಷಕರಿಗೆ ಮಂಜೂರಾತಿ ಪತ್ರವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ಸಿಆರ್‌ಪಿ ಚಂದ್ರಶೇಖರ್, ನಿವೃತ್ತ ಉಪ ತಹಸೀಲ್ದಾರ್ ಎಸ್.ಎಲ್. ಮೂರ್ತಿ, ಜನ ಜಾಗೃತಿ ಸಮಿತಿ ಸದಸ್ಯರಾದ ಶಿವಯ್ಯ, ಲತಾ ಮೋಹನ್, ಶಶಿಕಲಾ ಸೇರಿದಂತೆ ಶಿಕ್ಷಕರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿ ಇದ್ದರು.