ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಉತ್ತರಾಧಿಕಾರಿ ನೇಮಕ ; 21ನೇ ಶ್ರೀಗಳಾಗಿ ಶ್ರೀ ಅಭಿನವ ಕರಿವೃಷಭ ಶಿವಯೋಗಿದೇವರು ಅಧಿಕಾರ

30 NVK 1
Published on

ನೊಣವಿನಕೆರೆ: ತಿಪಟೂರು ತಾಲೂಕು ನೊಣವಿನಕೆರೆ ಕಾಡಸಿದ್ದೇಶ್ವರ ಮಠದಲ್ಲಿ ಉತ್ತರಾಧಿಕಾರಿ ನೇಮಕ ಸಮಾರಂಭ ಸೋಮವಾರ ನಡೆಯಿತು. ಬೆಳಗ್ಗೆ 4.30ರಿಂದ ಶ್ರೀಮಠದ ಮೂಲ ಕರ್ತೃ ಕಾಡಸಿದ್ದೇಶ್ವರ ಗದ್ದುಗೆಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾ ಮಂಗಳಾರತಿ ಹಾಗೂ ನೂತನ ಉತ್ತರಾಧಿಕಾರಿ ಶ್ರೀ ಅಭಿನವ ಕರಿವೃಷಭ ಶಿವಯೋಗಿ ದೇವರು ಸ್ವಾಮೀಜಿಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ವಿಶೇಷ ಪೂಜೆ ನೆರವೇರಿದವು. ನಂತರ ಬೆಳಗ್ಗೆ 10 ಗಂಟೆಗೆ ಸರಳವಾಗಿ ಉತ್ತರಾಧಿಕಾರ ಸ್ವೀಕಾರ ಸಮಾರಂಭ ನಡೆಯಿತು.

ಮಠದ ಹಿರಿಯ ಶ್ರೀ ಡಾ.ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿ, ಈವರೆಗೆ 19 ಗುರುಗಳು ಶ್ರೀ ಮಠದ ಪೀಠಾಧಿಪತಿಗಳಾಗಿದ್ದು, ನಾವು 1985ರಲ್ಲಿ 20ನೇ ಪೀಠಾಧಿಪತಿಯಾಗಿ ಅಧಿಕಾರ ಸ್ವೀಕಾರ ಮಾಡಿದಾಗ ಗ್ರಾಮದಿಂದ ಹೊರಭಾಗದಲ್ಲಿ ಸಂಚರಿಸಲು ಸರಿಯಾದ ರಸ್ತೆ ಮಾರ್ಗ ಹಾಗೂ ಯಾರ ಸಹಕಾರ, ಆಶ್ರಯ ಇಲ್ಲದೆ ಕಾಡಿನಲ್ಲಿರುವ ವಾತಾವರಣದಲ್ಲಿ ಶ್ರೀಮಠವಿತ್ತು. 38 ವರ್ಷದಿಂದ ಗುರು ಶ್ರೀ ವೀರಗಂಗಾಧರ ಸ್ವಾಮೀಜಿ, ಕಾಡಸಿದ್ದೇಶ್ವರರು ಹಾಗೂ ಕರಿಬಸವೇಶ್ವರ ಸ್ವಾಮೀಜಿ ಆಶೀರ್ವಾದದಿಂದ ಇಲ್ಲಿಯವರೆಗೆ ನಾಡಿನಾದ್ಯಂತ ಪ್ರಸಿದ್ಧ ಮಠವಾಗಿ ಬೆಳೆದು ಬಂದಿದೆ ಎಂದರು.

ಅಭಿನವ ಕರಿವೃಷಭ ಶಿವಯೋಗಿ ದೇವರು ಸ್ವಾಮೀಜಿಗೆ ಲಿಂಗದೀಕ್ಷೆ, ವಿರಕ್ತ ಪರಂಪರೆಯ ನಮನ ಮಂತ್ರ, ಶಿವಪಂಚಾಕ್ಷರಿ ಮಂತ್ರ ದೀಕ್ಷೆ ಜತೆಗೆ ಶಿವಯೋಗ ಮಂದಿರದಲ್ಲಿ 108 ದಿನ ಅನುಷ್ಠಾನ ನಡೆಯಲಿದೆ. ಶ್ರೀಮಠದ ಭಕ್ತರು ಕಿರಿಯ ಶ್ರೀಗಳಿಗೆ ಸಹಕಾರ ನೀಡುವ ಮೂಲಕ ಮಠದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.

ಅಕ್ಕಲಕೋಟ ವಿರಕ್ತಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಮಹಾರಾಷ್ಟ್ರ ಕರ್ಜಗಿ ಮಠದ ಶ್ರೀ ಶಿವಾನಂದ ಸ್ವಾಮೀಜಿ, ಹತ್ತಿರಣ ಬಸವ ಮಠದ ಶ್ರೀ ಪ್ರಶಾಂತ ಸ್ವಾಮೀಜಿ, ಗೋಸಲ ಚನ್ನಬಸವೇಶ್ವರ ಸ್ವಾಮೀಜಿ, ಬೆಂಗಳೂರಿನ ವಿಶ್ವಕಲ್ಯಾಣ ಟ್ರಸ್ಟ್ ಸದಸ್ಯರು, ಶ್ರೀ ಮಠದ ದಾಸೋಹ ಸಮಿತಿ ಸದಸ್ಯರು, ತುರುವೇಕೆರೆ, ತಿಪಟೂರು, ನೊಣವಿನಕೆರೆ ವೀರಶೈವ ಮುಖಂಡರು ಇದ್ದರು.

ಮೂಲತಃ ಹುಬ್ಬಳ್ಳಿಯವರು....: ಹುಬ್ಬಳ್ಳಿಯವರಾದ ಶ್ರೀ ಅಭಿನವ ಕರಿವೃಷಭ ಶಿವಯೋಗಿ ದೇವರು ಸ್ವಾಮೀಜಿ ಪೂರ್ವಾಶ್ರಮದ ಹೆಸರು ಶಿವಯೋಗಿ ದೇವರು. ಪರಮೇಶ್ವರಯ್ಯ ಬಸವಯ್ಯ ಸಂಸ್ಥಾನಮಠ್, ಶ್ರೀದೇವಿ ಅವರು ಶ್ರೀಗಳ ಪೂರ್ವಾಶ್ರಮದ ತಂದೆ-ತಾಯಿ. ಕಾಡಸಿದ್ದೇಶ್ವರ ಮಠದಲ್ಲಿ ಪ್ರಾಥಮಿಕ ಶಿಕ್ಷಣ ಕಲಿತ ಶ್ರೀಗಳು, ಪ್ರೌಢಶಾಲೆ ವಿದ್ಯಾಭ್ಯಾಸವನ್ನು ಹುಬ್ಬಳ್ಳಿಯಲ್ಲಿ ಪೂರ್ಣಗೊಳಿಸಿ ಮತ್ತೆ ತಿಪಟೂರಿನ ಉದಯಭಾರತಿ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮಾಡಿದ್ದಾರೆ. ಜೆಎಸ್‌ಎಸ್ ಸುತ್ತೂರು ಮಠದಲ್ಲಿ ಬಿ.ಎ., ಧಾರವಾಢದಲ್ಲಿ ಎಂ.ಎ. ಮುಗಿಸಿ ಜ್ಯೋತಿಷ್ಯ ವಿಜ್ಞಾನ ಅಭ್ಯಾಸ ಮಾಡಿದ್ದಾರೆ. ಉಡುಪಿಯಲ್ಲಿ 2 ವರ್ಷ ಯೋಗಾಭ್ಯಾಸ ಮಾಡಿದ್ದಾರೆ.

ಹಿರಿಯ ಡಾ.ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಶ್ರೀ ಮಠದ ಜವಾಬ್ದಾರಿ ವಹಿಸಿದ್ದು, ಕ್ಷೇತ್ರದ ಪರಂಪರೆಯಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯನಿರ್ವಹಿಸುವುದು, ಪೀಠದ ಅಜ್ಜನ, ಕಾಡಸಿದ್ದೇಶ್ವರರ ಆಶೀರ್ವಾದ ಹಾಗೂ ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ಕ್ಷೇತ್ರದ ಬೆಳವಣೆಗೆ ಹಾಗೂ ಎಲ್ಲ ಸಮಾಜದವರಿಗೂ ಶ್ರೀ ಮಠದಿಂದ ಆಗುವ ಕೆಲಸ ಮಾಡಲು ಸಿದ್ಧರಾಗಿದ್ದು, ಸದ್ಭಕ್ತರು ಹಿರಿಯ ಶ್ರೀಗಳಿಗೆ ನೀಡಿದ ಸಹಕಾರ ನೀಡಬೇಕು. ಶ್ರೀ ಅಭಿನವ ಕರಿವೃಷಭ ಶಿವಯೋಗಿದೇವರು ಸ್ವಾಮೀಜಿ, ಕಾಡಸಿದ್ದೇಶ್ವರ ಮಠದ ನೂತನ ಕಿರಿಯ ಶ್ರೀಗಳು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net