ಕಳಸಕ್ಕೆ ಇನ್ನೆರಡು ತಿಂಗಳಲ್ಲಿ ಕಾಯಂ ವೈದ್ಯರ ನೇಮಕ

kls q
ಕಳಸದಲ್ಲಿ ಪ್ರತಿಭಟನೆ ನಡೆಸಿದ ಸಿಪಿಐ ಕಾರ್ಯಕರ್ತರೊಂದಿಗೆ ಜಿಲ್ಲಾ ವೈದ್ಯಾಧಿಕಾರಿ ಅಶೋಕ್ ಬಾಬು ಮಾತುಕತೆ ನಡೆಸಿದರು. ಗೋಪಾಲ್ ಶೆಟ್ಟಿ, ಗೋಪಾಲ ಹಡ್ಲು, ಮಹೇಶ್, ಸತೀಶ್ ಭಟ್ ಇತರರಿದ್ದರು.
Published on

ಕಳಸ: ಕಳಸ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಖಾಲಿ ಹುದ್ದೆಗಳ ಶೀಘ್ರ ಭರ್ತಿ ಹಾಗೂ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಸೋಮವಾರ ಆರಂಭಿಸಿದ ಧರಣಿ ಜಿಲ್ಲಾ ವೈದ್ಯಾಧಿಕಾರಿಗಳ ವಿವಿಧ ಭರವಸೆಯೊಂದಿಗೆ ಮಂಗಳವಾರ ತಾತ್ಕಾಲಿಕ ಅಂತ್ಯಗೊಂಡಿತು.

ಮಂಗಳವಾರ ಜಿಲ್ಲಾ ವೈದ್ಯಾಧಿಕಾರಿ ಅಶೋಕ್ ಬಾಬು ಪ್ರತಿಭಟನಾನಿರತರೊಂದಿಗೆ ಮಾತುಕತೆ ನಡೆಸಿದರು. ನಾಲ್ಕು ವರ್ಷಗಳಿಂದ ವೈದ್ಯರ ಸಮಸ್ಯೆ ಇದ್ದರೂ ಯಾರೂ ಶಾಶ್ವತ ಪರಿಹಾರ ನೀಡಿಲ್ಲ. ಆಸ್ಪತ್ರೆಯ 47 ಹುದ್ದೆಗಳ ಪೈಕಿ 39 ಹುದ್ದೆಗಳು ಖಾಲಿ ಇದೆ. ಪ್ರತಿ ಬಾರಿಯೂ ಕಾಯಂ ವೈದ್ಯರನ್ನು ನೇಮಿಸುವಂತೆ ಪ್ರತಿಭಟನೆ ಮಾಡಿಯೇ ಕೇಳಬೇಕಾಗಿದೆ. ಆಗ ಅಧಿಕಾರಿಗಳು ಬಂದು ಮುಂಗೈಗೆ ತುಪ್ಪ ಸವರಿ ಹೋಗುತ್ತಾರೆ. ಆಸ್ಪತ್ರೆಗೆ ಸೌಲಭಣ್ಯ ಕಲ್ಪಿಸುವಲ್ಲಿ ಶಾಸಕರು, ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ನಿಮ್ಮ ಭರವಸೆಗಳು ನಮಗೆ ಬೇಕಾಗಿಲ್ಲ. ನಿಮಗೆ ಸಾಧ್ಯವಾದರೆ ಇಲ್ಲಿ ಕಾಯಂ ವೈದ್ಯರನ್ನು ನೇಮಿಸಿ. ಇಲ್ಲವಾದರೆ ಆಸ್ಪತ್ರೆಗೆ ಬೀಗ ಹಾಕಿ ಎಂದು ಪಕ್ಷದ ಮುಖಂಡ ಲಕ್ಷ್ಮಣಾಚಾರ್ ಹೇಳಿದರು.
ಜಿಲ್ಲಾ ವೈದ್ಯಾಧಿಕಾರಿ ಅಶೋಕ್ ಬಾಬು ಮಾತನಾಡಿ, ರಾಜ್ಯದಲ್ಲಿ ಸರ್ಕಾರಿ ವೈದ್ಯರ ಸಮಸ್ಯೆ ಇದೆ. ಕಳಸ ಗ್ರಾಮೀಣ ಭಾಗವಾಗಿರುವುದರಿಂದ ವೈದ್ಯರು ಬರುತ್ತಿಲ್ಲ. ಕಾಯಂ ವೈದ್ಯರನ್ನು ಕೊಡಲು ಸಾಧ್ಯವಿಲ್ಲ. ಎರಡು ದಿನಕ್ಕೆ ಒಬ್ಬರಂತೆ ಇಬ್ಬರು ವೈದ್ಯರನ್ನು ತಾತ್ಕಲಿಕವಾಗಿ ನಿಯೋಜನೆ ಮಾಡುತ್ತೇನೆ. ಎರಡು ತಿಂಗಳ ಒಳಗೆ 6 ಎಂಬಿಬಿಎಸ್ ವೈದ್ಯರನ್ನು ನೇಮಕ ಮಾಡುತ್ತೇನೆ. ಇಲ್ಲಿ ಎಲ್ಲ ಸೌಲಭ್ಯವೂ ಇದೆ. ಇನ್ನು ಎರಡು ತಿಂಗಳಲ್ಲಿ ಡಯಾಲಿಸಸ್ ಕೇಂದ್ರ ತೆರೆಯಲಾಗುವುದು. ತಾಲೂಕು ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ಎಲ್ಲ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.
ತಾತ್ಕಾಲಿಕ ಪರಿಹಾರ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆದಿದ್ದೇವೆ. ಎರಡು ತಿಂಗಳಲ್ಲಿ ಪರಿಹಾರ ನೀಡದೆ ಇದ್ದಲ್ಲಿ ಮತ್ತೆ ಹೋರಾಟ ಮುಂದುವರಿಸುತ್ತೇವೆ ಎಂದು ಮುಖಂಡ ರಮೇಶ್ ಕೆಳಗೂರು ತಿಳಿಸಿದರು.
ಸಿಪಿಐ ತಾಲೂಕು ಕಾರ್ಯದರ್ಶಿ ಗೋಪಾಲ್ ಶೆಟ್ಟಿ, ಮುಖಂಡರಾದ ಗೋಪಾಲ ಹಡ್ಲು, ಸ್ಥಳೀಯರಾದ ಟಿಟ್ಟು ತೋಮಸ್, ಮಹೇಶ್, ಸತೀಶ್ ಭಟ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net