

ಬೆಂಗಳೂರು: ಬಿಬಿಎಂಪಿಯ ಎಲ್ಲ ವಾರ್ಡ್‌ಗಳಲ್ಲಿ ನಾಗರಿಕರ ಕುಂದು-ಕೊರತೆ ನಿವಾರಿಸಲು ವಾರ್ಡ್‌ಗೆ ಒಬ್ಬರಂತೆ ನೋಡಲ್ ಅಧಿಕಾರಿಯನ್ನು ನೇಮಿಸಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಬುಧವಾರ ಸುತ್ತೋಲೆ ಹೊರಡಿಸಿದ್ದಾರೆ.
ನೋಡಲ್ ಅಧಿಕಾರಿಗಳು ತಮಗೆ ನಿಯೋಜಿಸಿರುವ ವಾರ್ಡ್‌ಗಳಲ್ಲಿ ಕಡ್ಡಾಯವಾಗಿ ಪ್ರತಿ ಬುಧವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಕಚೇರಿಯ ಅವಧಿಯಲ್ಲಿ ಹಾಜರಿದ್ದು, ನಾಗರಿಕರೊಂದಿಗೆ ಸಭೆ ನಡೆಸಬೇಕು. ದೂರು ಸಮಸ್ಯೆಗಳನ್ನು ಆಲಿಸಿ ಇತರ ವಾರ್ಡ್ ಮಟ್ಟದ ಅಧಿಕಾರಿಗಳ ಸಹಯೋಗದೊಂದಿಗೆ ಸಮಸ್ಯೆಯನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಹೊಣೆಯನ್ನು ನೀಡಲಾಗಿದೆ.
ಪ್ರತಿ ಬುಧವಾರ ನಡೆಯುವ ಸಾರ್ವಜನಿಕ ಸಭೆ ಕುರಿತು ಸಾರ್ವಜನಿಕರಿಗೆ ಸೂಕ್ತ ಪ್ರಚಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಜತೆಗೆ ಜಲಮಂಡಳಿ, ಬೆಸ್ಕಾಂ, ಬಿಡಿಎ ಸೇರಿ ಇತರ ಇಲಾಖೆಗಳಿಗೆ ಸಂಬಂಧಿಸಿದ್ದಲ್ಲಿ ಆಯಾ ಅಧಿಕಾರಗಳೊಂದಿಗೆ ಸಮನ್ವಯ ಸಾಧಿಸಿ, ಸಮಸ್ಯೆಯನ್ನು ವಾರ್ಡ್ ಹಂತದಲ್ಲಿಯೇ ಪರಿಹರಿಸಬೇಕು. ವಾರ್ಡ್ ಮಟ್ಟದಲ್ಲಿ ಬಗೆಹರಿಸಲಾಗದ ಸಮಸ್ಯೆಗಳನ್ನು ವಲಯ ಮಟ್ಟದಲ್ಲಿ ಪರಿಶೀಲಿಸಿ ಅಗತ್ಯ ಕ್ರಮಕ್ಕಾಗಿ ಮೇಲಧಿಕಾರಿಗಳಿಗೆ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಸಭೆಗೆ ವಲಯ ಆಯುಕ್ತರ ಭೇಟಿ:
ಪಾಲಿಕೆಯ 8 ವಲಯಗಳಲ್ಲಿ ಬರುವ ಎಲ್ಲ ವಾರ್ಡ್‌ಗಳಲ್ಲಿ ಪ್ರತಿ ಬುಧವಾರ ಸಭೆ ನಡೆಯಲಿದೆ. ಈ ಸಂಬಂಧ ವಲಯ ಆಯುಕ್ತರು ವೇಳಾಪಟ್ಟಿ ಸಿದ್ದಪಡಿಸಿಕೊಂಡು ಪ್ರತಿ ಬುಧವಾರದಂದು ತಮ್ಮ ವಲಯದ ವಾರ್ಡ್‌ಗಳಿಗೆ ಭೇಟಿ ನೀಡಿ ವಾರ್ಡ್ ಮಟ್ಟದಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದೆ. ಡಿಸಿಎಂ ಸೂಚನೆ ಅನ್ವಯ ಪ್ರತಿ ವಾರ್ಡ್‌ಗೆ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ.
ವೆಬ್ಸೈಟ್ಟ್ನಲ್ಲಿ ನೋಡಲ್ ಅಧಿಕಾರಿಗಳ ಪಟ್ಟಿ:
ಪಾಲಿಕೆಯ ಎಂಟೂ ವಲಯಗಳಲ್ಲಿನ ವಾರ್ಡ್‌ಗಳಿಗೆ ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದ್ದು, ವಾರ್ಡ್‌ವಾರು ನಿಯೋಜಿತ ನೋಡಲ್ ಅಧಿಕಾರಿಯ ಹೆಸರು, ವಾರ್ಡ್ ಹೆಸರು, ಹುದ್ದೆ ಹಾಗೂ ದೂರವಾಣಿ ಸಂಖ್ಯೆ ಇರುವ ಪಟ್ಟಿಯನ್ನು ಪಾಲಿಕೆಯ ವೆಬ್ ಸೈಟ್ನಲ್ಲಿ ಅಪ್‌ಲೋಡ್ ಮಾಡಲಾಗಿದೆ.