ಶೀಘ್ರ ಸ್ತ್ರೀರೋಗ ತಜ್ಞರ ನೇಮಕ ಭರವಸೆ

MLA Satish Sail Visited to Ankola Govt Hospital
Published on

ಅಂಕೋಲಾ: ಅಂಕೋಲಾ ತಾಲೂಕು ಆಸ್ಪತ್ರೆಗೆ ನಿಯೋಜನೆಯ ಮೇರೆಗಾದರೂ ಸ್ತ್ರೀ ರೋಗ ತಜ್ಞರನ್ನು ನೇಮಕ ಮಾಡಲಾಗುವುದು ಎಂದು ಶಾಸಕ ಸತೀಶ ಸೈಲ್ ಭರವಸೆ ನೀಡಿದರು.

ಅಂಕೋಲಾ ತಾಲೂಕು ಆಸ್ಪತ್ರೆಯಲ್ಲಿ ಎರಡುವರೆ ವರ್ಷದಿಂದ ಹೆರಿಗೆ ತಜ್ಞರಿಲ್ಲದ ಕುರಿತು ‘ವಿಜಯವಾಣಿ’ ಜೂನ್ 17 ರಂದು ‘ಸ್ತ್ರೀರೋಗ ತಜ್ಞರು ಬೇಕಾಗಿದ್ದಾರೆ’ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.

ಪರಿಣಾಮ ಅವರು ತಾಲೂಕು ಆಸ್ಪತ್ರೆಗೆ ಸೋಮವಾರ ಸಾಯಂಕಾಲ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಆಡಳಿತ ವೈದ್ಯಾಧಿಕಾರಿ ಡಾ.ಸಂತೋಷಕುಮಾರ್ ರಾವ್ ಅವರಲ್ಲಿ ಆಸ್ಪತ್ರೆಯ ಕೊರತೆಗಳ ಕುರಿತು ಮಾಹಿತಿ ಪಡೆದುಕೊಂಡರು.

ಖಾಲಿ ಇರುವ ಸ್ತ್ರೀರೋಗ ತಜ್ಞರು, ಚರ್ಮ ಹಾಗೂ ಕಣ್ಣಿನ ತಜ್ಞರು, ಕೆಲವೇ ದಿನಗಳಲ್ಲಿ ತೆರವಾಗಲಿರುವ ಮಕ್ಕಳ ತಜ್ಞರ ಹುದ್ದೆಗಳಿಗೆ ವೈದ್ಯರನ್ನು ನೇಮಕ ಮಾಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಆಸ್ಪತ್ರೆಯ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕು. ಬಡವರಿಗೆ ಹೆಚ್ಚಿನ ಸೌಲಭ್ಯ ನೀಡಬೇಕು. ಆಸ್ಪತ್ರೆಯಲ್ಲಿ ಕೊಂದು ಕೊರತೆಗಳಿದ್ದರೆ ನನಗೆ ತಿಳಿಸಿ ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ವೈದ್ಯರಾದ ಈಶ್ವರಪ್ಪ, ಅನುಪಮಾ ನಾಯ್ಕ, ಡಾ.ರಮೇಶ, ಶತಿ, ರಾಜೇಶ, ನಿವತ್ತ ಡಿಎಚ್‌ಒ ಡಾ.ಶರದ್ ನಾಯಕ, ಕಾಂಗ್ರೆಸ್ ಮುಖಂಡರಾದ ಕೆ. ಶಂಭು ಶೆಟ್ಟಿ ಕಾರವಾರ, ವಿನೋದ ನಾಯಕ ಬಾಸಗೋಡ, ಗೋಪು ನಾಯಕ ಅಡ್ಲೂರು, ಪುರುಷೋತ್ತಮ ನಾಯ್ಕ, ರಂಜನ ಹಿಚ್ಕಡ, ನಾಗೇಂದ್ರ ನಾಯ್ಕ, ರಾಜೇಶ ನಾಯ್ಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net