ಗುತ್ತಿಗೆ ಆಧಾರದ ಮೇಲೆ ವೈದ್ಯರ ನೇಮಕಕ್ಕೆ ಪ್ರಯತ್ನ

05 ylp 02 (tp)
Published on

ಯಲ್ಲಾಪುರ: ಪಟ್ಟಣದ ತಾ.ಪಂ. ಸಭಾಭವನದಲ್ಲಿ ಆಡಳಿತಾಧಿಕಾರಿ ನಟರಾಜ ಟಿ.ಎಚ್. ಅಧ್ಯಕ್ಷತೆಯಲ್ಲಿ ಬುಧವಾರ ಸಾಮಾನ್ಯ ಸಭೆ ನಡೆಯಿತು. ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ ಮಾತನಾಡಿ, ತಾಲೂಕಿನಲ್ಲಿ ವಜ್ರಳ್ಳಿ, ಮಲವಳ್ಳಿ, ಮಂಚಿಕೇರಿ, ಕಿರವತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲ. ಗುತ್ತಿಗೆ ಆಧಾರದ ಮೇಲೆ ವೈದ್ಯರ ನೇಮಕಕ್ಕೆ ಪ್ರಯತ್ನಿಸಲಾಗುವುದು. ಬಾಣಂತಿಯರ ಸಾವು ಆಗದಂತೆ ತಡೆಯಲು ವಿಶೇಷ ಜಾಗ್ರತೆ ವಹಿಸಲಾಗುವುದು ಎಂದರು.

ಪಶು ಸಂಗೋಪನಾ ಇಲಾಖೆಯ ಡಾ.ಸುಬ್ರಾಯ ಭಟ್ಟ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪಶು ಸಖಿಯರಿಂದ ಸಮರ್ಪಕವಾದ ಕೆಲಸ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಗೌರವಧನ ತೀರ ಕಡಿಮೆ ಎಂಬ ಕಾರಣ ನೀಡಿ, ಕೆಲಸ ತೊರೆದು ಹೋಗುತ್ತಿದ್ದಾರೆ ಎಂದರು.

ಸಹಾಯಕ ತೋಟಗಾರಿಕಾ ಅಧಿಕಾರಿ ಕೀರ್ತಿ ಮಾತನಾಡಿ, ಮುಂದಿನ ವರ್ಷದಿಂದ ಕಡಿಮೆ ವೆಚ್ಚದ ಅಣಬೆ ಘಟಕಗಳಿಗೆ ಸಹಾಯಧನ ವಿತರಣೆ ಯೋಜನೆ ಆರಂಭವಾಗಲಿದೆ ಎಂದರು. ಸಹಾಯಕ ಕೃಷಿ ನಿರ್ದೇಶಕ ನಾಗರಾಜ ನಾಯ್ಕ ಮಾತನಾಡಿ, ಬೇರೆ ಬೇರೆ ಸಮಸ್ಯೆಗಳ ಕಾಕರಣಕ್ಕಾಗಿ ಕೃಷಿ ಬೆಳೆ ಬೆಳೆಯುವ ರೈತರ ಸಂಖ್ಯೆ ಕಡಿಮೆಯಾಗುತ್ತಿದೆ. ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆ ಹಾನಿಯಾಗುತ್ತಿದೆ. ತಾ.ಪಂ. ಇಒ ರಾಜೇಶ ಧನವಾಡಕರ್, ಲೆಕ್ಕಾಧಿಕಾರಿ ಎಂ.ಡಿ. ಮೋಹನ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ನಿಗದಿತ ಸಮಯಕ್ಕಿಂತ ಒಂದು ತಾಸು ತಡವಾಗಿ ಸಭೆ ಆರಂಭವಾಯಿತು. ನಿಗದಿತ ಸಮಯಕ್ಕೆ ಬಂದ ಆಡಳಿತಾಧಿಕಾರಿ ಇತರ ಅಧಿಕಾರಿಗಳಿಗಾಗಿ ಮುಕ್ಕಾಲು ತಾಸು ಕಾಯುವಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net