ಕ್ಲೇಮು ಕಮಿಷನರ್​ಗಳ ನೇಮಕ: ಡಿಕೆಶಿ ಬಂಧನ, ಮಹದಾಯಿ ತೀರ್ಪು ವಿರೋಧಿಸಿ ನಡೆಸಿದ್ದ ಬಂದ್

ಹಿಗಹತ
Published on

ಬೆಂಗಳೂರು: ಮಹದಾಯಿ ನ್ಯಾಯಾಧಿಕರಣದ ತೀರ್ಪು ವಿರೋಧಿಸಿ ಹಾಗೂ ಜಾರಿ ನಿರ್ದೇಶನಾಲಯ ಮಾಡಿದ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ಬಂಧನ ಖಂಡಿಸಿ ನಡೆದ ಪ್ರತ್ಯೇಕ ಬಂದ್​ಗಳಿಂದ ಆಗಿರುವ ಸಾರ್ವಜನಿಕ ಆಸ್ತಿ ನಷ್ಟ ಪ್ರಮಾಣ ಅಂದಾಜಿಸಲು ಇಬ್ಬರು ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ಹೈಕೋರ್ಟ್ ಕ್ಲೇಮು ಕಮಿಷನರ್ ಆಗಿ ನೇಮಕ ಮಾಡಿದೆ.

ಬಂದ್​ಗಳಿಗೆ ಕರೆ ನೀಡಿದ್ದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಎರಡು ಪ್ರತ್ಯೇಕ ಪಿಐಎಲ್​ಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು.

ಮಹದಾಯಿ ನ್ಯಾಯಾಧಿಕರಣದ ತೀರ್ಪು ಖಂಡಿಸಿ 2018ರ ಜ.25, ಫೆ.4 ಮತ್ತು ಏ.12ರಂದು ನಡೆದ ಕರ್ನಾಟಕ ಬಂದ್ ವೇಳೆ ಉಂಟಾದ ಸಾರ್ವಜನಿಕ ಆಸ್ತಿ ನಷ್ಟ ಪ್ರಮಾಣ ಅಂದಾಜಿಸಲು ನಿವೃತ್ತ ಜಿಲ್ಲಾ ನ್ಯಾಯಾಧೀಶ ಮಹ್ಮದ್ ಗೌಸ್ ಎಂ. ಪಟೇಲ್ ಅವರನ್ನು ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಂಧನ ಖಂಡಿಸಿ ಚನ್ನಪಟ್ಟಣ, ಕನಕಪುರ ಸೇರಿ ವಿವಿಧೆಡೆ ನಡೆದ ಪ್ರತಿಭಟನೆಗಳಿಂದ ಉಂಟಾದ ಆಸ್ತಿ ನಷ್ಟ ಅಂದಾಜಿಸಲು ನಿವೃತ್ತ ಜಿಲ್ಲಾ ನ್ಯಾಯಾಧೀಶ ಸಿ.ಆರ್. ಬೆನಕನಹಳ್ಳಿ ಅವರನ್ನು ಕ್ಲೇಮು ಕಮೀಷನರ್​ಗಳನ್ನಾಗಿ ಹೈಕೋರ್ಟ್ ನೇಮಕ ಮಾಡಿತು.

ಈ ಆದೇಶದ ಪ್ರತಿ ಹೈಕೋರ್ಟ್ ವೆಬ್​ಸೈಟ್​ನಲ್ಲಿ ಲಭ್ಯವಾದ ಮೂರು ತಿಂಗಳ ಒಳಗೆ ಕ್ಲೇಮು ಕಮಿಷನರ್ ಹಾಗೂ ಅವರಿಗೆ ಅಗತ್ಯವಿರುವ ಸಿಬ್ಬಂದಿ ವರ್ಗವನ್ನು ನೇಮಿಸಿ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ಅದಾದ ಆರು ತಿಂಗಳಲ್ಲಿ ಕ್ಲೇಮು ಕಮಿಷನರ್​ಗೆ ಸುಸಜ್ಜಿತ ಕಚೇರಿ, ಕಾರು, ಚಾಲಕ ಮತ್ತು ಪೀಠೋಪಕರಣ ಸೇರಿ ಮೂಲಸೌಕರ್ಯ ಒದಗಿಸಬೇಕು ಎಂದು ವಿಭಾಗೀಯ ಪೀಠ ನಿರ್ದೇಶನ ನೀಡಿದೆ.

ಹಾಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಧೀಶರಿಗೆ ನೀಡುವ ವೇತನ ಹಾಗೂ ಭತ್ಯೆಯನ್ನು ಕ್ಲೇಮು ಕಮಿಷನರ್​ಗೆ ಕಲ್ಪಿಸಬೇಕು. ಅವರ ನೇಮಕಾತಿ ಕುರಿತು ಸಾರ್ವಜನಿಕರ ಗಮನಕ್ಕೆ ತರಲು ಅಗತ್ಯ ಪ್ರಚಾರ ನೀಡಬೇಕು. ಮೌಲ್ಯಮಾಪಕರನ್ನು ಹೇಗೆ ಬಳಸಿಕೊಳ್ಳ ಬೇಕು, ನಷ್ಟ ಅಂದಾಜಿಸಲು ಯಾವ ವ್ಯವಸ್ಥೆ ಅಳವಡಿಸಿ ಕೊಳ್ಳಬೇಕು ಎಂಬುದನ್ನು ಕ್ಲೇಮು ಕಮೀಷನರ್ ನಿರ್ಧರಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ಈ ವಿಚಾರದಲ್ಲಿ ಹೈಕೋರ್ಟ್​ನಿಂದ ಯಾವುದಾದರೂ ನಿರ್ದೇಶನ ಅಥವಾ ಮಾರ್ಗದರ್ಶನ ಅಗತ್ಯವಾದರೆ, ಕಮಿಷನರ್ ಸೂಕ್ತ ಅರ್ಜಿ ಸಲ್ಲಿಸಬಹುದು. ಕ್ಲೇಮು ಕಮಿಷನರ್ ಕೆಲಸಗಳನ್ನು ಹೈಕೊರ್ಟ್ ಮೇಲ್ವಿಚಾರಣೆ ನಡೆಸಲಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net