ಬನವಾಸಿ ಕನ್ನಡ ಶಾಲೆಗೆ ಶಿಕ್ಷಕರನ್ನು ನಿಯುಕ್ತಿಗೊಳಿಸಿ

17sirsi5 MANAVI
Published on

ಶಿರಸಿ: ತಾಲೂಕಿನ ಬನವಾಸಿಯ ಕನ್ನಡ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಗೆ ಕೊರತೆಯಿರುವ ಓರ್ವ ಶಿಕ್ಷಕರನ್ನು ನಿಯುಕ್ತಿ ಮಾಡಬೇಕು ಎಂದು ಡಿಡಿಪಿಐ ಪಿ. ಬಸವರಾಜ ಅವರಿಗೆ ಎಸ್​ಡಿಎಂಸಿ ಸದಸ್ಯರು ಶನಿವಾರ ಮನವಿ ಸಲ್ಲಿಸಿದರು.

ಶಾಲೆಯಲ್ಲಿ ಒಟ್ಟು 104 ಮಕ್ಕಳು ಅಧ್ಯಯನ ಮಾಡುತ್ತಿದ್ದು 6 ಜನ ಶಿಕ್ಷಕರನ್ನು ನಿಯೋಜನೆ ಮಾಡಲಾಗಿತ್ತು. ಆದರೆ, ಕೆ.ಎಚ್. ಶಿವಕುಮಾರ ಎಂಬ ಶಿಕ್ಷಕ ಕಳೆದ ನವೆಂಬರ್​ನಲ್ಲಿ ಬೇರೆ ಜಿಲ್ಲೆಗೆ ನಿಯೋಜನೆಗೊಂಡಿದ್ದಾರೆ. ಈ ಶಾಲೆಯಲ್ಲಿ ಮುಖ್ಯೋಪಾಧ್ಯಾಯರನ್ನು ಸೇರಿ ಕೇವಲ 4 ಶಿಕ್ಷಕರು ಈಗ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಿಕ್ಷಕರ ಕೊರತೆಯಿಂದಾಗಿ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದ್ದು, ಪಾಲಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸಲು ಮುಂದಾಗುತ್ತಿದ್ದಾರೆ. ಅದ್ದರಿಂದ ನಿಯೋಜನೆ ಮೇಲೆ ತೆರಳಿರುವ ಶಿಕ್ಷಕನನ್ನು ವಾಪಾಸ್ ನಮ್ಮ ಶಾಲೆಗೆ ಹಾಜರಾಗುವಂತೆ ಮಾಡಬೇಕು. ಇಲ್ಲದಿದ್ದರೆ ಬೇರೆ ಶಿಕ್ಷಕರನ್ನು ನಿಯೋಜನೆ ಮಾಡಬೇಕು. ನಮ್ಮ ಶಾಲೆಗೆ ಅತಿಥಿ ಶಿಕ್ಷಕರನ್ನು ನಿಯೋಜನೆ ಮಾಡದೇ ಕಾಯಂ ಶಿಕ್ಷಕರನ್ನು ನಿಯೋಜಿಸಬೇಕು. ಇಲ್ಲವಾದರೆ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಮನವಿ ಸ್ವೀಕರಿಸಿದ ಉಪ ನಿರ್ದೇಶಕ ಪಿ. ಬಸವರಾಜ ಮಾತನಾಡಿ, ಕೂಡಲೇ ಒಂದು ಅತಿಥಿ ಶಿಕ್ಷಕರನ್ನು ನೇಮಕ ಮಾಡಿ ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಎಸ್​ಡಿಎಂಸಿ ಅಧ್ಯಕ್ಷ ಸಂತೋಷ ಕುರುಬರ, ಶಾಂತಲಾ ಕಾನಳ್ಳಿ, ಚಂದ್ರಶೇಖರ ತಳದ, ಜ್ಯೋತಿ ಗೌಳಿ, ಗಣಪತಿ ಚನ್ನಯ್ಯ, ರಾಜೇಶ್ವರಿ ಮಠದ, ಮಹೇಶ್ ಶೇಟ್, ಪಿ.ಜಿ. ಖರೆ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net