

ಮೂಡಿಗೆರೆ: ಸತ್ತಿಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರನ್ನು ನೇಮಿಸುವಂತೆ ಆಗ್ರಹಿಸಿ ಎಸ್‌ಡಿಎಂಸಿ ಸದಸ್ಯರು, ವಿದ್ಯಾರ್ಥಿಗಳ ಪಾಲಕರು ಮತ್ತು ಗ್ರಾಮಸ್ಥರು ಶುಕ್ರವಾರ ಶಾಲೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಎಸ್‌ಡಿಎಂಸಿ ಅಧ್ಯಕ್ಷ ಜಯಂತ್ ಮಾತನಾಡಿ, ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳಿಗೆ ಪಾಠ ಇಲ್ಲದಂತಾಗಿದೆ. ಓರ್ವ ಅತಿಥಿ ಶಿಕ್ಷಕಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದ ಶಿಕ್ಷಕರು ವರ್ಗಾವಣೆ ಮಾಡಿಸಿಕೊಂಡು ಹೋಗಿದ್ದಾರೆ. ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕಿ ಮಾಲತಿ ಅವರನ್ನು ಕಡೂರು ತಾಲೂಕಿನ ಶಾಲೆಗೆ ನಿಯೋಜನೆ ಮೇಲೆ ವರ್ಗಾಯಿಸಲಾಗಿದೆ. ಆ ಶಿಕ್ಷಕಿಯ ನಿಯೋಜನೆ ರದ್ದುಗೊಳಿಸಿ ಇದೇ ಶಾಲೆಗೆ ನಿಯೋಜಿಸಬೇಕು ಎಂದು ಒತ್ತಾಯಿಸಿದರು.
ಶಾಲೆಯಲ್ಲಿ 16 ವಿದ್ಯಾರ್ಥಿಗಳು ಇದ್ದಾರೆ. ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಪ್ರತಿ ವರ್ಷ ಕಡಿಮೆಯಾಗುತ್ತಿದೆ. ಈ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರೇ ಇಲ್ಲದ ಕಾರಣ ಮಕ್ಕಳು ಟಿಸಿ ಪಡೆದುಕೊಂಡು ಹೋಗುತ್ತಿದ್ದಾರೆ. ಗ್ರಾಮೀಣ ಪ್ರದೇಶವಾಗಿರುವ ಕಾರಣ ಇಲ್ಲಿನ ವಿದ್ಯಾರ್ಥಿಗಳು ದೂರದ ಶಾಲೆಗೆ ಹೋಗಲು ಬಸ್ ವ್ಯವಸ್ಥೆಯಿಲ್ಲ. ಗ್ರಾಮದಲ್ಲಿ ಶಾಲಾ ಕಟ್ಟಡವಿದ್ದರೂ ಪ್ರಯೋಜನವಿಲ್ಲದಂತಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಶಾಲೆ ಮುಚ್ಚಬೇಕಾಗುತ್ತದೆ. ಸರ್ಕಾರಿ ಶಾಲೆಗಳನ್ನು ಉಳಿಸಲು ಅಧಿಕಾರಿಗಳು ಪ್ರಯತ್ನಿಸಬೇಕು ಎಂದು ಹೇಳಿದರು.
ವಿಷಯ ತಿಳಿದು ಶಾಲೆಗೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ ಚಂದ್ರ ಆಗಮಿಸಿದರು. ಶಾಲೆಗೆ ಒಂದೆರಡು ದಿನದಲ್ಲಿ ಓರ್ವ ಶಿಕ್ಷಕರನ್ನು ನಿಯೋಜನೆ ಮಾಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಸ್ಥಗಿತಗೊಳಿಸಿದರು.
ಪ್ರತಿಭಟನಾಕಾರರು ಬಿಇಒ ಹೇಮಂತ್ ಚಂದ್ರ ಅವರಿಗೆ ಮನವಿ ಸಲ್ಲಿಸಿದರು. ಊರುಬಗೆ ಗ್ರಾಪಂ ಸದಸ್ಯ ನಚಿಕೇತ್, ಪಿಡಿಒ ಇಂತೇಶ್, ಎಸ್‌ಡಿಎಂಸಿ ಸದಸ್ಯರಾದ ಅರುಣ, ಜಯಕುಮಾರ್, ಮಧುಶ್ರೀ, ಧರ್ಮೇಶ್, ಮಹೇಶ್, ನಿರಂಜನ್, ಗ್ರಾಮಸ್ಥರಾದ ಬಸವರಾಜ್, ಪ್ರಕಾಶ್, ಜಯಪಾಲ್, ಅಶೋಕ್, ರಮೇಶ್, ಪ್ರೇಮ್‌ಕುಮಾರ್, ರತನ್, ಶೋಧನ್ ಇತರರಿದ್ದರು.