ಕಳಸ ಆಸ್ಪತ್ರೆಗೆ ಕಾಯಂ ವೈದ್ಯರ ನೇಮಿಸಿ

kls1 (1)
Published on

ಕಳಸ: ಕಳಸ ಸರ್ಕಾರಿ ಆಸ್ಪತ್ರೆಗೆ ಕಾಯಂ ವೈದ್ಯರನ್ನು ನೇಮಿಸುವಂತೆ ಡಾ.ರಾಜ್ ಕನ್ನಡ ಸಂಘ ಮತ್ತು ಕರವೇ(ಪ್ರವೀಣ್ ಶೆಟ್ಟಿ ಬಳಗ)ದ ಸದಸ್ಯರು ಬೆಂಗಳೂರಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಕಳಸದಲ್ಲಿ ಸುಸಜ್ಜಿತವಾದ ಸಮುದಾಯ ಆರೋಗ್ಯ ಕೇಂದ್ರವಿದೆ. ಇದು ಈ ಭಾಗದ ಸುತ್ತಮುತ್ತಲಿನ ಎಲ್ಲ ಹಳ್ಳಿಗಳಿಗೂ ಪ್ರಮುಖ ಆಸ್ಪತ್ರೆಯಾಗಿರುತ್ತದೆ. ಈ ಭಾಗದಲ್ಲಿ ವಾಸ ಮಾಡುತ್ತಿರುವ ಬಡ ಕೃಷಿಕರು ಮತ್ತು ಕೂಲಿ ಕಾರ್ಮಿಕರು, ಸಣ್ಣ , ಸಣ್ಣ ರೈತಾಪಿವರ್ಗದವರು ಈ ಸಮುದಾಯ ಆರೋಗ್ಯ ಕೇಂದ್ರವನ್ನು ನಂಬಿಕೊಂಡಿರುತ್ತಾರೆ.

ಆದರೆ ಆಸ್ಪತ್ರೆಯಲ್ಲಿ ಒಂದು ತಿಂಗಳಿನಿಂದ ವೈದ್ಯರು, ಸಿಬ್ಬಂದಿ ಕೊರತೆ ಇದೆ. ತುರ್ತಾಗಿ ಯಾರೇ ರೋಗಿಗಳು ಇಲ್ಲಿಗೆ ಬಂದರೂ ವೈದ್ಯರಿಲ್ಲದೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಅಪಘಾತ ಅಥವಾ ಇನ್ನಿತರ ಕಾರಣಗಳಿಂದ ಮೃತರಾದ ವ್ಯಕ್ತಿಯ ಮರಣೋತ್ತರ ಪರೀಕ್ಷೆ ಮಾಡಲು ವೈದ್ಯರಿಲ್ಲದಿರುವುದರಿಂದ ಬಾಳೆಹೊನ್ನೂರು, ಕೊಪ್ಪ, ಮೂಡಿಗೆರೆ ಮುಂತಾದ ಕಡೆಗಳಿಗೆ ಶವ ತೆಗೆದುಕೊಂಡು ಹೋಗಬೇಕು. ವೈದ್ಯರ ಸಹಿ ಮಾಡಬೇಕಾದರೆ ಮೂಡಿಗೆರೆ, ಬಾಳೆಹೊನ್ನೂರು, ಕಾರ್ಕಳ, ಕೊಪ್ಪ ಮುಂತಾದ ಕಡೆಗಳಿಗೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ. ಕಾಯಂ ವೈದ್ಯರನ್ನು ನೇಮಿಸದಿದ್ದರೆ 15 ರಿಂದ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಡಾ.ರಾಜ್ ಕನ್ನಡ ಸಂಘದ ಅಧ್ಯಕ್ಷ ಕನ್ನಡ ರಾಜು ಸಚಿವರ ಗಮನಕ್ಕೆ ತಂದಿದ್ದಾರೆ.

ಮನವಿಗೆ ಸ್ಪಂದಿಸಿದ ಸಚಿವರು, ನೀವು ಉಪವಾಸ ಕೂರುವ ಅಗತ್ಯವಿಲ್ಲ. ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ಕಳಸಕ್ಕೆ ಕಾಯಂ ವೈದ್ಯರನ್ನು ನೇಮಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಜೆಡಿಎಸ್ ಮುಖಂಡ ಸುರೇಶ್ ಕುಮಾರ್, ನಿರ್ಮಾಪಕ ಲಕ್ಷ್ಮಣ್ ಕುಮಾರ್, ರಾಜ್ ಕನ್ನಡ ಸಂಘ ಜಿಲ್ಲಾಧ್ಯಕ್ಷ ಓಂಕಾರಪ್ಪ, ಕರವೇ ಗೌರವಾಧ್ಯಕ್ಷ ಮಲ್ನಾಡ್ ಶರೀಫ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net