

ಎನ್.ಅರ್.ಪುರ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಿಸಬೇಕು ಎಂದು ಒತ್ತಾಯಿಸಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಎಬಿವಿಪಿ ಶೃಂಗೇರಿ ತಾಲೂಕು ಘಟಕದ ಸಂಚಾಲಕ ಅಭಿಷೇಕ್ ಮಾತನಾಡಿ, ರಾಜ್ಯದಲ್ಲಿ ಕಾಲೇಜು ಶಿಕ್ಷಣ ಇಲಾಖೆಯಡಿ ಬರುವ 432 ಪದವಿ ಕಾಲೇಜುಗಳಲ್ಲಿ 6 ಸಾವಿರ ಕಾಯಂ ಉಪನ್ಯಾಸಕರಲ್ಲಿ ಈಗಾಗಲೇ 3 ಸಾವಿರ ಉಪನ್ಯಾಸಕರು ನಿವೃತ್ತರಾಗಿದ್ದಾರೆ. 3 ಸಾವಿರ ಕಾಯಂ ಉಪನ್ಯಾಸಕರೊಂದಿಗೆ 12 ಸಾವಿರ ಅತಿಥಿ ಉಪನ್ಯಾಸಕರ ಸೇವಾ ನೆರವಿನಿಂದ ಪದವಿ ತರಗತಿಗಳು ನಡೆಯುತ್ತಿವೆ. ಈಗಾಗಲೇ ಸಾವಿರಾರು ಜನರು ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಹಾಕಿದ್ದಾರೆ. ಆದರೆ ರಾಜ್ಯ ಸರ್ಕಾರ ಮಾತ್ರ ಹುದ್ದೆಗೆ ಆಹ್ವಾನ ಮಾಡುತ್ತಿಲ್ಲ ಎಂದು ದೂರಿದರು.
ಉಪನ್ಯಾಸಕರಿಲ್ಲದೆ ತರಗತಿಗಳು ನಡೆಯುತ್ತಿಲ್ಲ. ನಾವು ಹೇಗೆ ಓದುವುದು. ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ವಿದ್ಯಾರ್ಥಿಗಳ ತಪ್ಪು ಎಂದು ಸರ್ಕಾರ ನಮ್ಮ ಮೇಲೆ ಗೂಬೆ ಕೂರಿಸುತ್ತದೆ. ಮಾನ್ಯ ಉಚ್ಛ ನ್ಯಾಯಾಲಯದ ಮಧ್ಯಂತರ ಆದೇಶದಂತೆ ಅರ್ಹ ಅತಿಥಿ ಉಪನ್ಯಾಸಕರ ನೇಮಕಾತಿಗೆ ಕೂಡಲೇ ಕ್ರಮವಹಿಸಬೇಕು. ಪದವಿ ಶಿಕಣವನ್ನು ಬಲಪಡಿಸಿ, ಶೈಕ್ಷಣಿಕ ಕ್ಷೇತ್ರವನ್ನು ಆದ್ಯತಾ ವಲಯ ಎಂದು ಪರಿಗಣಿಸಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಪಡೆಯುವುದು ವಿದ್ಯಾರ್ಥಿಗಳ ಹಕ್ಕು ಎಂದರು.
ತಹಸೀಲ್ದಾರ್ ಡಾ.ನೂರುಲ್‌ಹುದಾ ಮಾತನಾಡಿ, ನಿಮ್ಮ ಬೇಡಿಕೆಯನ್ನು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಕಾಲೇಜು ಶಿಕ್ಷಣ ಮಂತ್ರಿಗಳಿಗೆ ಪತ್ರಿಸಲಾಗುವುದು. ತರಗತಿಗೆ ತೊಂದರೆಯಾಗದಂತೆ ಕ್ರಮವಹಿಸಲು ಪ್ರಾಚಾರ್ಯರಿಗೆ ಸೂಚಿಸಲಾಗುವುದು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಪಟ್ಟಣದ ಅಂಬೇಡ್ಕರ್‌ವೃತ್ತದವರೆಗೆ ವಿದ್ಯಾರ್ಥಿಗಳು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು. ನಂತರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ದೀಪಕ್, ಚಿಕ್ಕಮಗಳೂರು ಜಿಲ್ಲಾ ಸಂಚಾಲಕ ಧನುಷ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದಾರ್ಥ್, ಎನ್.ಆರ್.ಪುರ ತಾಲ್ಲೂಕು ಸಂಚಾಲಕ ಶ್ರೇಯಸ್ ಇದ್ದರು.