ಬೂತ್ ಮಟ್ಟದ ಅಧಿಕಾರಿಗಳನ್ನು ನೇಮಿಸಿ: ಬಿಬಿಎಂಪಿಗೆ ಕೇಂದ್ರ ಚುನಾವಣಾ ಆಯೋಗ ಸೂಚನೆ

election meeting
Published on

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆ ಪೂರ್ಣ ಪ್ರಮಾಣದ ಸಿದ್ಧತೆ ಆರಂಭಿಸುವ ಜತೆಗೆ ಮತದಾರರ ಪಟ್ಟಿಯನ್ನು ಯಾವುದೇ ಲೋಪ ಇಲ್ಲದೆ ಪರಿಷ್ಕರಣೆ ಮಾಡಬೇಕು. ಅಧಿಕ ಪ್ರಮಾಣದ ಮತದಾನ ಆಗುವ ರೀತಿ ನಾಗರಿಕರನ್ನು ಒಳಗೊಂಡ ಅಭಿಯಾನವನ್ನು ಕೈಗೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು ಬಿಬಿಎಂಪಿ ಚುನಾವಣಾ ವಿಭಾಗಕ್ಕೆ ಸೂಚನೆ ನೀಡಿದೆ.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಬೆಂಗಳೂರು ನಗರ ಜಿಲ್ಲೆಯಲ್ಲಿ ನಡೆದಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಚಟುವಟಿಕೆಗಳನ್ನು ಪರಿಶೀಲಿಸಿದ ಆಯೋಗದ ತಂಡವು ನಗರ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಮುಖ್ಯ ಆಯುಕ್ತರಿಗೆ ಖಡಕ್ ನಿರ್ದೇಶನವನ್ನು ನೀಡಿತು.

ಈ ವೇಳೆ ಮಾತನಾಡಿದ ಕೇಂದ್ರ ಚುನಾವಣಾ ಆಯೋಗದ ಕಾರ್ಯದರ್ಶಿ ಅಜಯ್ ಕುಮಾರ್ ವರ್ಮಾ ಮಾತನಾಡಿ, ಬೆಂಗಳೂರು ವ್ಯಾಪ್ತಿಯಲ್ಲಿ ಬೂತ್ ಮಟ್ಟದ ಅಧಿಕಾರಿಗಳ ನೇಮಕವನ್ನು ತ್ವರಿತಗೊಳಿಸಬೇಕು. ಎಲ್ಲ ಬಿಎಲ್‌ಒಗಳು ಮನೆ-ಮನೆ ಭೇಟಿ ನೀಡಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಆಗದಿರುವವರನ್ನು ಮತಪಟ್ಟಿಗೆ ಸೇರಿಸುವ ಕೆಲಸ ಮಾಡಬೇಕು. ವಿಶೇಷ ಅಭಿಯಾನಗಳನ್ನು ಹಮ್ಮಿಕೊಂಡು ಮತದಾರರ ಪಟ್ಟಿಯನ್ನು ನಿಖರ ಹಾಗೂ ಪಾರದರ್ಶಕವಾಗಿ ಸಿದ್ಧಪಡಿಸಬೇಕು ಎಂದು ಸೂಚಿಸಿದರು.

ಮತದಾರರ ಸೇರ್ಪಡೆಗೆ ಹೆಚ್ಚು ಗಮನ ಹರಿಸಿ:

ಬೆಂಗಳೂರು ವ್ಯಾಪ್ತಿಯಲ್ಲಿ ತೃತೀಯ ಲಿಂಗಿಗಳು, ಚಿಂದಿ ಆಯುವವರು, ನಿರಾಶ್ರಿತರು, ಅಲೆಮಾರಿಗಳು ಮತ್ತು ವಲಸಿಗರು, ಯುವ ಮತ್ತು ಮೊದಲ ಬಾರಿಯ ಮತದಾರರು ಸೇರಿದಂತೆ ಇನ್ನಿತರರ ಮೇಲೆ ಹೆಚ್ಚು ಗಮನವರಿಸಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ವರ್ಮಾ ಸೂಚನೆ ನೀಡಿದರು.

ಆಯೋಗ ಅಧಿಕಾರಿಗಳಿಂದ ಮೆಚ್ಚುಗೆ:

ಬೆಂಗಳೂರು ವ್ಯಾಪ್ತಿಯಲ್ಲಿ ನಮೂನೆ 6 ಹಾಗೂ ನಮೂನೆ 7ರ ಪ್ರಗತಿಯನ್ನು ಕುರಿತು ಭಾರತೀಯ ಚುನಾವಣಾ ಆಯೋಗದ ಅಧಿಕಾರಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಮರಣ ಹೊಂದಿದ ಮನೆಯವರಿಂದ ಮರಣ ಹೊಂದಿರುವ ಬಗ್ಗೆ ಖಾತರಿಪಡಿಸಿಕೊಂಡು ಪತ್ರ ಸಂಗ್ರಹಿಸುವುದು, ಮರಣ ಪ್ರಮಾಣಪತ್ರವನ್ನು ಸಂಗ್ರಹಿಸುವುದು ಹಾಗೂ ಬೂತ್ ಮಟ್ಟದ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಮೃತಪಟ್ಟಿರುವ ಬಗ್ಗೆ ಖಾತರಿಪಡಿಸಿಕೊಂಡು ನಮೂನೆ 7ನ್ನು ನೀಡಿ ಮತದಾರರ ಪಟ್ಟಿಯಿಂದ ತೆಗೆಯುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು.

ಎನ್‌ಆರ್‌ಐ ಮತದಾರರ ಗುರುತಿಸಿ:

ಬೆಂಗಳೂರು ನಗರ ವ್ಯಾಪ್ತಿಯಲ್ಲಿಯ ಅನಿವಾಸಿ ಭಾರತೀಯ ಮತದಾರ (ಎನ್‌ಆರ್‌ಐ) ಗುರುತಿಸಿ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅನಿವಾಸಿ ಭಾರತೀಯರು ನಮೂನೆ 6ಅ ಮೂಲಕ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡೂ ಟರ್ಮಿನಲ್ಗಳ ಪ್ರವೇಶದ್ವಾರಗಳ ಬಳಿ ಬ್ಯಾನರ್‌ಗಳನ್ನು ಅಳವಡಿಸಲು ಜಿಲ್ಲಾ ಪಂಚಾಯ್ತಿ ಸಿಇಒ ಕಾಂತರಾಜುಗೆ ಸೂಚಿಸಿದರು.

ನಗರದಲ್ಲಿ ಚುನಾಣಾವಣೆಯ ಮಹತ್ವ, ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವುದು ಸೇರಿದಂತೆ ಸ್ವೀಪ್ ಚಟುವಟಿಕೆಗಳನ್ನು ಹೆಚ್ಚಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಪಾಲಿಕೆ ಆಯಾ ವಲಯ ವ್ಯಾಪ್ತಿಯ ವಲಯ ಆಯುಕ್ತರು, ಜಂಟಿ ಆಯುಕ್ತರು ಹಾಗೂ ಎಲ್ಲ ಕಂದಾಯ ಅಧಿಕಾರಿಗಳ ಕಚೇರಿಗಳಲ್ಲಿ ಮತದಾರ ಪಟ್ಟಿಯಲ್ಲಿ ಸೇರ್ಪಡೆಯಾಗುವ ಭಿತ್ತಿಪತ್ರಗಳನ್ನು ಅಂಟಿಸಿ ಜಾಗೃತಿ ಮೂಡಿಸಬೇಕು ಎಂದು ಅವರು ನಿರ್ದೇಶನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net