ಎ.ಎಸ್.ಪೊನ್ನಣ್ಣಗೆ ಅರಣ್ಯ ಸಚಿವ ಸ್ಥಾನ ನೀಡಿ: ರಫೀಕ್

a.s.ponnanna
Published on

ಮಡಿಕೇರಿ: ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಅರಣ್ಯ ಸಚಿವ ಸ್ಥಾನ ನೀಡಿದಲ್ಲಿ ಕೊಡಗಿನ ಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಸಿಗಲಿದೆ ಎಂದು ವಿರಾಜಪೇಟೆ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ರಫೀಕ್ ಕೋಳುಮಂಡ ಆಗ್ರಹಿಸಿದರು.


ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷಕ್ಕೆ ಕಡಿವಾಣ ಹಾಕದಿದ್ದಲ್ಲಿ ಮುಂದೆ ಭಾರೀ ಅಪಾಯ ಎದುರಾಗುವ ಸಾಧ್ಯತೆ ಇರುತ್ತದೆ. ಪೊನ್ನಣ್ಣ ಅವರಿಗೆ ಸಂಪುಟದಲ್ಲಿ ಯಾವುದೇ ಜವಾಬ್ದಾರಿ ನೀಡಿದರೂ ಸಮರ್ಥವಾಗಿ ನಿಭಾಯಿಸಲಿದ್ದಾರೆ. ಆದರೆ, ಅರಣ್ಯ ಸಚಿವ ಸ್ಥಾನ ನೀಡಿದಲ್ಲಿ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾದ್ಯವಾಗುತ್ತದೆ ಎಂದು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.


ಕೊಡಗಿನಲ್ಲಿ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಚುನಾವಣೆಯಲ್ಲಿ ಗೆಲುವು ಸಾಧಿಸುವ ಪರಿಸ್ಥಿತಿ ಇತ್ತು. ಆದರೆ, ಈ ಬಾರಿ ಜಿಲ್ಲೆಯ ಪ್ರಜ್ಞಾವಂತ ಮತದಾರರು ಯಾವುದೇ ಷಡ್ಯಂತ್ರಕ್ಕೆ ಮಣಿದಿಲ್ಲ. ಪೊನ್ನಣ್ಣ ವಿರುದ್ಧದ ಅಪಪ್ರಚಾರಕ್ಕೂ ಕಿವಿಗೊಡದೆ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಕಾಂಗ್ರೆಸ್‌ಗೆ ಮತ ನೀಡಿದ್ದಾರೆ. ಬೆಲೆ ಏರಿಕೆ ವಿರುದ್ಧ ಬೇಸತ್ತು, ಸಮಾಜದಲ್ಲಿ ಅಸ್ಥಿರತೆ ಉಂಟಾಗದಿರಲಿ ಎಂಬ ಉದ್ದೇಶದಿಂದ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆಯಲಿದ್ದು, ಜನರ ಸಮಸ್ಯೆಗಳಿಗೆ ಶಾಸಕರು ಸಕಾರಾತ್ಮಕ ಸ್ಪಂದನೆ ನೀಡಲಿದ್ದಾರೆ ಎಂದರು.


ಸುದ್ದಿಗೋಷ್ಠಿಯಲ್ಲಿ ವಿರಾಜಪೇಟೆ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಪಿ.ಎ.ಹನೀಫ್, ಪ.ಪಂಚಾಯಿತಿ ಸದಸ್ಯ ರಾಜೇಶ್ ಪದ್ಮನಾಭ, ಮುಖಂಡರಾದ ಎಂ.ಎಂ.ಇಸ್ಮಾಯಿಲ್, ಶಬರೀಶ್, ಅಬ್ದುಲ್ ರೆಹಮಾನ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net