ಆಸ್ಪತ್ರೆಗೆ ಕಾಯಂ ವೈದ್ಯರನ್ನು ನೇಮಿಸಿ

02
Published on

ತುರುವೇಕೆರೆ: ಜಿಲ್ಲೆಯಲ್ಲಿನ ಸರ್ಕಾರಿ ಆಸ್ಪತ್ರೆ, ವಿದ್ಯಾರ್ಥಿನಿಲಯ ಹಾಗೂ ಶಾಲೆಗಳಲ್ಲಿ ಅವ್ಯವಸ್ಥೆ ಬಗ್ಗೆ ಸಾರ್ವಜನಿಕ ದೂರು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್​ ತುರುವೇಕೆರೆ ತಾಲೂಕು ಆಸ್ಪತ್ರೆಗೆ ಬುಧವಾರ ದಿಢೀರ್​ ಭೇಟಿ ನೀಡಿ, ರೋಗಿಗಳ ಮತ್ತು ಸಾರ್ವಜನಿಕರ ಸಮಸ್ಯೆ ಆಲಿಸಿದರು. ಜಿಲ್ಲಾಧಿಕಾರಿ ಮುಂದೆಯೇ ಸಾರ್ವಜನಿಕರು ದೂರುಗಳ ಸುರಿಮಳೆಗೈದರು.

ವೈದ್ಯರಿಲ್ಲದೆ ಸಕಾಲದಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಎಕ್ಸರೇ, ಇಸಿಜಿ ಯಂತ್ರಗಳು ಕೆಟ್ಟುಹೋಗಿವೆ. ಲಭ್ಯವಿರುವ ವೈದ್ಯರು ಖಾಸಗಿ ಕ್ಲಿನಿಕ್​ ತೆರೆದು ರೋಗಿಗಳನ್ನು ಕ್ಲಿನಿಕ್​ಗಳಿಗೆ ಶಿಫಾರಸು ಮಾಡುತ್ತಿದ್ದಾರೆ. ಮಕ್ಕಳ ವೈದ್ಯರು, ಚರ್ಮರೋಗ, ಕಣ್ಣು, ಫಿಜಿಷಿಯನ್​, ಪ್ರಸೂತಿ ತಜ್ಞರು ಅರಿವಳಿಕೆ ತಜ್ಞ ವೈದ್ಯರಿಲ್ಲದೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ ಎಂದು ದೂರಿದರು.

ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಆರೋಗ್ಯಾಧಿಕಾರಿ ಡಾ.ರಂಗನಾಥ್​ ಮಾಹಿತಿ ನೀಡಿದರು. ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡಲು ಸುಸಜ್ಜಿತ ಕಟ್ಟಡವಿದ್ದರೂ ವೈದ್ಯರ ಕೊರತೆ ಎದ್ದುಕಾಣುತ್ತಿದೆ. ಕೂಡಲೇ ಹುದ್ದೆಗಳ ನೇಮಕಾತಿಗಾಗಿ ಕ್ರಮಕೈಗೊಳ್ಳುವ ಬಗ್ಗೆ ಪತ್ರ ಸಿದ್ಧಪಡಿಸಲು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ತುರ್ತು ಚಿಕಿತ್ಸಾ ಕೊಠಡಿ, ಮಹಿಳಾ ವಾರ್ಡ್​, ಡಯಾಲಿಸೀಸ್​ ಕೇಂದ್ರ, ಪುರುಷರ ವಾರ್ಡ್​, ಎನ್​ಸಿಡಿ ವಿಭಾಗಕ್ಕೆ ಭೇಟಿ ನೀಡಿ, ಒಳರೋಗಿಗಳೊಂದಿದೆ ಔಷಧ, ಆಹಾರ ವಿತರಣೆ ಮತ್ತು ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದುಕೊಂಡರು. ಔಷಧ ವಿತರಣಾ ಉಗ್ರಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಟಿಎಚ್​ಒ ಡಾ.ರಂಗನಾಥ್​ ಅವರಿಂದ ಆಸ್ಪತ್ರೆಯಲ್ಲಿ ಖಾಲಿ ಇರುವ ಸಿಬ್ಬಂದಿ ಮತ್ತು ವೈದ್ಯರ ಮಾಹಿತಿ ಪಡೆದುಕೊಂಡರು.

ಇಲ್ಲಿಗೆ ಚಿಕಿತ್ಸೆ ಪಡೆಯಲು ಸಾವಿರಾರು ರೋಗಿಗಳು ಬರುತ್ತಾರೆ. ಇರುವ ನಾಲ್ಕು ವೈದ್ಯರು ಎಷ್ಟು ಮಂದಿಯನ್ನು ನೋಡುತ್ತಾರೆ?. ಚಿಕಿತ್ಸೆಗಾಗಿ ವೈದ್ಯರಿಲ್ಲದೆ ದಿನಗಟ್ಟಲೆ ಕಾಯಬೇಕಿದೆ. ಮಕ್ಕಳ ತಜ್ಞರಿಲ್ಲ, ಸ್ತ್ರೀರೋಗ ತಜ್ಞರಿಲ್ಲ, ಗರ್ಭಿಣಿ ಸ್ತ್ರೀಯರ ಹೆರಿಗೆಗಾಗಿ ತಾಲೂಕಿನ ಜನರು ದೂರದ ತುಮಕೂರು, ತಿಪಟೂರಿಗೆ ಹೋಗುವ ಪರಿಸ್ಥಿತಿ ಇದೆ. ಕೂಡಲೇ ಆಸ್ಪತ್ರೆಗೆ ಕಾಯಂ ವೈದ್ಯರನ್ನು ನೀಡಬೇಕೆಂದು ಪಟ್ಟಣ ಪಂಚಾಯಿತಿ ಸದಸ್ಯ ಚಿದಾನಂದ್​ ಮನವಿ ಮಾಡಿದರು.

ನಂತರ ಪಟ್ಟಣದ ಸರ್ಕಾರಿ ಮೆಟ್ರಿಕ್​ ಪೂರ್ವ ಬಾಲಕರ ಹಾಸ್ಟೆಲ್​ಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಆಲಿಸಿದರು. ಬಾಡಿಗೆ ಕಟ್ಟಡದ ವಸತಿ ಶಾಲೆಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು,ಸಾರ್ವಜನಿಕ ಸೇವೆ ಒದಗಿಸುವ ಆಸ್ಪತ್ರೆ, ವಿದ್ಯಾರ್ಥಿ ನಿಲಯ, ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಿರುವ ಬಗ್ಗೆ ಪರಿಶೀಲಿಸಲು ಆಸ್ಪತ್ರೆ, ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಲಾಗಿದೆ.ಆಸ್ಪತ್ರೆಯಲ್ಲಿ ಕಾಯಂ ವೈದ್ಯರಿಲ್ಲ. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆಯಲಾಗುವುದು. ವೈದ್ಯರ ಕೊರತೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅವರ ಗಮನಕ್ಕೂ ತಂದು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವಿದ್ಯಾರ್ಥಿನಿಲಯಗಳಿಗೆ ಸ್ವಂತ ಕಟ್ಟಡಗಳ ನಿಮಾರ್ಣಕ್ಕಾಗಿ ಜಿಲ್ಲೆಯಲ್ಲಿ ಈವರೆಗೆ 73 ಸರ್ಕಾರಿ ಜಾಗ ಗುರುತಿಸಿ ಆಯಾ ಇಲಾಖೆ ಹಸ್ತಾಂತರಿಸಲಾಗಿದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾದ ನಂತರ ಸ್ವಂತ ಕಟ್ಟಡ ನಿಮಾರ್ಣಕ್ಕೆ ಇಲಾಖೆಗಳು ಕ್ರಮ ಕೈಗೊಳ್ಳಲಿವೆ ಎಂದರು.

ಮಾದಕ ವಸ್ತುಗಳ ಮಾರಾಟ ನಿಯಂತ್ರಣದ ಬಗ್ಗೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಜತೆ ಚರ್ಚಿಸಲಾಗಿದೆ. ಮಾದಕ ವಸ್ತುಗಳ ಬೇಡಿಕೆ ನಿಯಂತ್ರಿಸಿದಾಗ ಮಾತ್ರ ಮಾದಕ ದ್ರವ್ಯಗಳ ಮಾರಾಟಕ್ಕೆ ಕಡಿವಾಣ ಹಾಕಲು ಸಾಧ್ಯವಿದೆ, ಈ ಬಗ್ಗೆ ಅರಿವು ಮೂಡಿಸಲು ಮೂಲಕ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಶಾಲಾ-, ಕಾಲೇಜು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net