ಕರೊನಾ ತಡೆಗೆ ನೋಡೆಲ್ ಅಧಿಕಾರಿ ನೇಮಿಸಿ, ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಹೇಮಲತಾ ಸೂಚನೆ, ಕರೊನಾ ನಿಯಂತ್ರಣ ಪರಿಶೀಲನಾ ಸಭೆ

hemalatha
Published on

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಕರೊನಾ ಸೋಂಕು ನಿಯಂತ್ರಣಕ್ಕೆ ಜಿಲ್ಲಾಮಟ್ಟದಲ್ಲಿ ನೋಡಲ್ ಅಧಿಕಾರಿಯನ್ನು ನೇಮಿಸಬೇಕು, ಕ್ವಾರಂಟೈನ್ ವಾಚ್‌ಗಾರ್ಡ್ ಹಾಗೂ ಹೋಮ್ ಐಸೋಲೇಷನ್‌ಗೆ ಸಂಬಂಧಿಸಿದಂತೆ ಜಿಲ್ಲಾಮಟ್ಟದ ಅಧಿಕಾರಿ ಉಸ್ತುವಾರಿ ವಹಿಸಿಕೊಳ್ಳುವಂತೆ ಜವಾಬ್ದಾರಿ ನೀಡಬೇಕು ಎಂದು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಹೇಮಲತಾ ಸೂಚಿಸಿದರು.

ದೇವನಹಳ್ಳಿ ತಾಲೂಕು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಕರೊನಾಗೆ ಸಂಬಂಧಿಸಿದಂತೆ ದಿನನಿತ್ಯ ಪರಿಶೀಲನೆ ಮಾಡಲು ನೋಡಲ್ ಅಧಿಕಾರಿ ನೇಮಿಸುವುದರಿಂದ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಕರೊನಾ ಸೋಂಕು ನಿಯಂತ್ರಣ ಸಾಧ್ಯವಾಗಲಿದೆ ಎಂದರು.

ಜಿಲ್ಲೆಯಲ್ಲಿ ದಿನೇದಿನೆ ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ, ಮರಣ ಪ್ರಮಾಣವೂ ಏರಿಕೆಯಾಗುತ್ತಿದೆ, ಕರೊನಾ ಲಾಕ್‌ಡೌನ್ ತೆರವು ಬಳಿಕ ಜನಸಂಚಾರ ಸಾಮಾನ್ಯ ಸ್ಥಿತಿಗೆ ಮರಳಿದೆ, ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೆಚ್ಚೆಚ್ಚು ಕರೊನಾ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಸೂಚಿಸಿದರು.

ಅಧಿಕಾರಿಗಳು ಚುರುಕಾಗಿ ಕೆಲಸ ಮಾಡಬೇಕು, ಕರ್ತವ್ಯದ ವೇಳೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರೊನಾ ನಿಯಮ ಪಾಲಿಸಬೇಕು ಎಂದು ತಾಕೀತು ಮಾಡಿದರು.

ಆಯಾ ದಿನವೇ ಅಪ್‌ಲೋಡ್ ಮಾಡಿ: ಕರೊನಾ ಸೋಂಕಿತರ ಪ್ರಥಮ ಸಂಪರ್ಕ ಹಾಗೂ ದ್ವಿತೀಯ ಸಂಪರ್ಕ ದತ್ತಾಂಶ ಸಂಗ್ರಹದ ಮಾಹಿತಿಯನ್ನು ಆಯಾ ದಿನವೇ ಸಂಬಂಧಿಸಿದ ಆ್ಯಪ್‌ಗಳಿಗೆ ಅಪ್ಲೋಡ್ ಮಾಡಬೇಕು, ಇಲ್ಲವಾದರೆ ದತ್ತಾಂಶ ಮಾಹಿತಿಯಲ್ಲಿ ಏರುಪೇರಾಗುತ್ತದೆ, ಮಾಹಿತಿ ಸಂಗ್ರದಹಲ್ಲಿ ಗೊಂದಲಕ್ಕೆ ಕಾರಣವಾಗುತ್ತದೆ ಈ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಪಿ.ಹೇಮಲತಾ ತಾಕೀತು ಮಾಡಿದರು.

ಆರೋಗ್ಯಾಧಿಕಾರಿಗಳೊಂದಿಗೆ ಚರ್ಚೆ: ಸಭೆಯಲ್ಲಿ ಜಿಲ್ಲೆಯ ನಾಲ್ಕೂ ತಾಲೂಕುಗಳ ಆರೋಗ್ಯಾಧಿಕಾರಿಗಳೊಂದಿಗೆ ಕರೊನಾ ಸೋಂಕಿತ ಪ್ರಮಾಣ, ಗುಣಮುಖರಾದವರ ಅಂಕಿಅಂಶ ಸೇರಿ ತಾಲೂಕುವಾರು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆಯಲಾಯಿತು. ಕರೊನಾ ಸೋಂಕಿನಿಂದ ಮೃತಪಟ್ಟವರ ಅಂಕಿಸಂಖ್ಯೆಯ ಬಗ್ಗೆ ನಿಖರ ದಾಖಲೆಯಿರಬೇಕು ಯಾವುದೇ ಗೊಂದಲಕ್ಕೆ ಅವಕಾಶ ನೀಡಬಾರದು ಎಂದು ಹೇಮಲತಾ ಸೂಚಿಸಿದರು.

ಡೆಡಿಕೇಟೆಡ್ ಕೋವಿಡ್ ಆಸ್ಪತ್ರೆ: ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ, ಕರೊನಾ ಸೋಂಕಿತರಿಗಾಗಿಯೇ ದೇವನಹಳ್ಳಿಯಲ್ಲಿ ಕೋವಿಡ್ ಆಸ್ಪತ್ರೆ ತೆರೆಯಲಾಗಿದ್ದು, 300 ಹಾಸಿಗೆಗಳ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಜಿಲ್ಲೆಯ ಯಾವುದೇ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆಯಿಲ್ಲದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಇದುವರೆಗೆ 9088 ಕರೊನಾ ಸೋಂಕಿತರು ಕಂಡುಬಂದಿದ್ದಾರೆ. ಅವರಲ್ಲಿ 7621 ಮಂದಿ ಗುಣಮುಖರಾಗಿದ್ದಾರೆ, ಪ್ರಸ್ತುತ 1392 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ, ಜಿಲ್ಲೆಯಲ್ಲಿ ಇದುವರೆಗೂ 91 ಮಂದಿ ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಪಂ ಸಿಇಒ ಎನ್.ಎಂ.ನಾಗರಾಜ, ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್.ಕೆ.ನಾಯಕ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾದೇವಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಧರ್ಮೇಂದ್ರ, ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ ಅರುಳ್‌ಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net