ವಾಲ್ಮೀಕಿ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

28-10-Shiva-2
ರಾಯಚೂರಿನ ಮಹರ್ಷಿ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತದಿಂದ ಶನಿವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಉದ್ಘಾಟಿಸಿದರು. ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಉಪಾಧ್ಯಕ್ಷ ಬಷೀರ್ ಅಹ್ಮದ್, ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶ, ಜಿ.ಪಂ. ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ, ಸಹಾಯಕ ಆಯುಕ್ತೆ ಮಹೆಬೂಬಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಕಾರಿ ರಾಜೇಂದ್ರ ಜಲ್ದಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚೇತನಕುಮಾರ ಇದ್ದರು.
Published on

ರಾಯಚೂರು: ಮಹರ್ಷಿ ವಾಲ್ಮೀಕಿ ಸಮಾಜಕ್ಕೆ ನೀಡಿದ ಉತ್ತಮ ಸಂದೇಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿಗೆ ಆಚರಣೆಗೆ ಸಾರ್ಥಕತೆ ಬರುತ್ತದೆ ಎಂದು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಹೇಳಿದರು.
ಸ್ಥಳೀಯ ಮಹರ್ಷಿ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತದಿಂದ ಶನಿವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಕೇವಲ ಒಂದು ಸಮಾಜಕ್ಕೆ ಸೀಮತವಾಗಿಲ್ಲ. ಮನುಕುಲದ ಆಸ್ತಿಯಾಗಿದ್ದಾರೆ ಎಂದರು.
ಸಮಾಜ ಅಭಿವೃದ್ಧಿ ಹೊಂದಲು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕಾಗಿದೆ. ಮಕ್ಕಳಿಗೆ ಶಿಕ್ಷಣ ನೀಡುವುದು ಪೋಷಕರು ಮತ್ತು ಜನಪ್ರತಿನಿಗಳ ಕರ್ತವ್ಯವಾಗಿದ್ದು, ವಾಲ್ಮೀಕಿಯ ತತ್ತ್ವಾದರ್ಶಗಳನ್ನು ಇಂದಿನ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಸ್ಕಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ಮಹಾಂತಗೌಡ ಪಾಟೀಲ್ ಮಾತನಡಿ, ಆದಿಕವಿ, ಮಹಾಋಷಿ ಎಂದು ಹೆಸರುವಾಸಿಯಾಗಿರುವ ಮಹರ್ಷಿ ವಾಲ್ಮೀಕಿ ರಾಮಾಯಣ ರಚಿಸುವ ಮೂಲಕ ಕೆಳ ಸಮುದಾಯ ಸಂಸ್ಕೃತ ಕಲಿಯುವುದು ಅಪರಾಧ ಎನ್ನುವ ಕಾಲದಲ್ಲಿ ವೌಢ್ಯತೆಯನ್ನು ತೊಲಗಿಸಿದ ಮಹಾನುಭವರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯು ದ್ವಿತೀಯ, ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಲು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಾಲ್ಮೀಕಿ ಸಮುದಾಯದ ಸಾಧಕರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಇದಕ್ಕೂ ಮುಂಚೆ ನಗರದ ಪ್ರಮುಖ ಬೀದಿಗಳಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ನಗರ ಶಾಸಕ ಡಾ.ಶಿವರಾಜ ಪಾಟೀಲ್ ಮೆರವಣಿಗೆ ಚಾಲನೆ ನೀಡಿದರು. ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ, ಎಸ್ಪಿ ಬಿ.ನಿಖಿಲ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net