ಒತ್ತುವರಿ ಜಾಗ ಗುತ್ತಿಗೆ ಪಡೆಯಲು ಅರ್ಜಿ ಸಲ್ಲಿಸಿ

16-MDG-1P1
Published on

ಮೂಡಿಗೆರೆ: ಬೆಳೆಗಾರರು ಒತ್ತುವರಿ ಮಾಡಿಕೊಂಡಿರುವ ಜಾಗದಲ್ಲಿರುವ ಕಾಫಿ ತೋಟಗಳನ್ನು ಗುತ್ತಿಗೆ ಆಧಾರದಲ್ಲಿ ಬೆಳೆಗಾರರಿಗೆ ಕೊಡುವ ಸರ್ಕಾರದ ಯೋಜನೆಗೆ ಪ್ರತಿಯೊಬ್ಬರೂ ನಾಡಕಚೇರಿಗೆ ತೆರಳಿ ಅರ್ಜಿ ಸಲ್ಲಿಸಬೇಕು ಎಂದು ಬೆಳೆಗಾರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಹೇಳಿದರು.

ಬೆಳೆಗಾರರ ಭವನದಲ್ಲಿ ನಡೆದ ತಾಲೂಕು ಬೆಳೆಗಾರರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕಾಫಿ ಬೆಳೆಯನ್ನು ಸರ್ಫೇಸಿ ಕಾಯ್ದೆ ವ್ಯಾಪ್ತಿಯಿಂದ ಕೇಂದ್ರ ಸರ್ಕಾರ ಹೊರಗಿಟ್ಟಿರುವುದರಿಂದ ಬೆಳೆಗಾರರು ನಿಟ್ಟುಸಿರು ಬಿಡುವಂತಾಗಿದೆ. ರಾಜ್ಯಸರ್ಕಾರ ಜಾರಿಗೊಳಿಸಿರುವ ಗುತ್ತಿಗೆ ಆಧಾರದಲ್ಲಿ ಒತ್ತುವರಿ ಜಾಗ ನೀಡುವ ವ್ಯವಸ್ಥೆಯಲ್ಲಿ ಅಗತ್ಯವಿರುವ ಎಲ್ಲ ರೈತರು ಸೇರ್ಪಡೆಗೊಳ್ಳಬೇಕು ಎಂದರು.

ಈ ಬಾರಿ ಡಿಸೆಂಬರ್‌ನಲ್ಲಿ ಅಕಾಲಿಕ ಮಳೆಯಾಗಿರುವುದರಿಂದ ಬೆಳೆಗಾರರಿಗೆ ಹೆಚ್ಚಿನ ಸಮಸ್ಯೆಯಾಗಿದೆ. ಮಳೆಯಾದಾಗ ಕಾಫಿ ಬೆಳೆ ಕೊಯ್ಲಿಗೆ ಬಂದಿರುವ ಕಾರಣ ಗಿಡದಲ್ಲಿದ್ದ ಕಾಫಿ ಹಣ್ಣು ನೆಲಕ್ಕೆ ಉದುರಿದೆ. ಗಿಡದಲ್ಲಿ ಹೂವು ಅರಳಿರುವುದರಿಂದ ಮುಂದಿನ ವರ್ಷದ ಬೆಳಗೆ ಸಂಚಕಾರ ಉಂಟಾಗಿದೆ. ಭತ್ತದ ಕೊಯ್ಲು ಆರಂಭವಾಗಿದ್ದು ಮಳೆಯಿಂದ ಭತ್ತ ಮಣ್ಣು ಪಾಲಾಗಿದೆ. ರೈತರು ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಭತ್ತದ ಬೆಳೆ ರೈತರ ಕೈ ಸೇರದೆ ದೊಡ್ಡ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಸರ್ಕಾರ ಕಾಫಿ ಮತ್ತು ಭತ್ತದ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬೆಳೆಗಾರರ ಸಂಘದ ಸಂಘದ ನೂತನ ಕಟ್ಟಡದ ಸಮಗ್ರ ಮಾಹಿತಿ ಹಾಗೂ ಕಟ್ಟಡ ನಿರ್ಮಾಣ ಖರ್ಚು- ವೆಚ್ಚದ ವಿವರವನ್ನು ಸಭೆಯಲ್ಲಿ ಮಂಡಿಸಲಾಯಿತು. ಕಟ್ಟಡದ ಉದ್ಘಾಟನೆ, ಸಂಘದ ಕಚೇರಿಗೆ ಸಿಬ್ಬಂದಿ ನೇಮಕಾತಿ ಬಗ್ಗೆ ಚರ್ಚಿಸಲಾಯಿತು.ಬೆಳೆಗಾರರ ಸಂಘದ ಕಾರ್ಯದರ್ಶಿ ಕೆ.ಡಿ.ಮನೋಹರ್, ಬೆಳೆಗಾರರಾದ ಹಳಸೆ ಶಿವಣ್ಣ, ಬಿ.ಎಸ್. ಜಯರಾಮ್, ಡಿ.ಎಸ್.ರಘು, ಬಿ.ಬಿ.ಬಸವರಾಜ್, ಡಿ.ಆರ್. ಪುಟ್ಟಸ್ವಾಮಿಗೌಡ, ಎಂ.ಡಿ.ಜಯಪಾಲ್, ಕೆ.ಎಚ್.ವೆಂಕಟೇಶ್, ಎಂ.ಎನ್. ಅಶ್ವಥ್, ನಾರಾಯಣಗೌಡ, ರೇವಣ್ಣಗೌಡ, ನಿಡುವಾಳೆ ಚಂದ್ರು, ಬಿ.ಆರ್.ಯತೀಸ್, ನರೇಂದ್ರಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net