ಕಟ್ಟಡ ಪರವಾನಗಿ, ಸಿಸಿ ಆದೇಶ ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಿ

h31-jagadish shetter
Published on

ಹುಬ್ಬಳ್ಳಿ: ಸುಪ್ರೀಂ ಕೋರ್ಟ್ ನೀಡಿದ ಬಿಲ್ಡಿಂಗ್ ಪರ್ಮಿಷನ್, ಸಿಸಿ ಕುರಿತ ಆದೇಶವನ್ನು ರಾಜ್ಯ ಸರ್ಕಾರ ಮರು ಪರಿಶೀಲಿಸುವಂತೆ ಅರ್ಜಿ ದಾಖಲಿಸಬೇಕು. ಇಲ್ಲವೇ ಬಡವರಿಗೆ ಅನ್ಯಾಯವಾಗದ ರೀತಿಯಲ್ಲಿ ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಜನರ ಹಿತ ಕಾಯುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಆದೇಶ ನೀಡಿರಬಹುದು. ಈ ಆದೇಶದಿಂದ ಮಹಾನಗರ, ನಗರ, ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿರುವ ಮತ್ತು ವಾಸವಿರುವ ಕೋಟ್ಯಂತರ ಜನರಿಗೆ ಸಮಸ್ಯೆ ಆಗಲಿದೆ. ಕಟ್ಟಿಸುವ ಮನೆಗಳಿಗೆ ಹಾಗೂ ಕಟ್ಟಡಗಳಿಗೆ ವಿದ್ಯುರ್, ಕುಡಿಯುವ ನೀರು ಹಾಗೂ ಒಳಚರಂಡಿ ಸಂಪರ್ಕ ಪಡೆದುಕೊಳ್ಳಬೇಕಾದರೆ ಆ ಮನೆಯ ಮತ್ತು ಕಟ್ಟಡಗಳಿಗೆ ಬಿಲ್ಡಿಂಗ್ ಪರ್ಮಿಷನ್, ಸಿಸಿ ಇವೆಲ್ಲ ಪಡೆದುಕೊಂಡಿರಬೇಕು. ಆಗ ಮಾತ್ರ ಅವರಿಗೆ ಈ ಎಲ್ಲ ಸಂಪರ್ಕ ಕೊಡಬಹುದು. ಬಿಲ್ಡಿಂಗ್ ಪರ್ಮಿಷನ್ ಹಾಗೂ ಸಿಸಿ ಇಲ್ಲವಾದರೆ ಈ ಸಂಪರ್ಕ ಕೊಡಬಾರದೆಂದು ನಿರ್ದೇಶನ ಕೊಟ್ಟ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ನಾಡಿನ ಲಕ್ಷಾಂತರ ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ಈ ಯಾವುದೇ ಸಂಪರ್ಕ ಪಡೆದುಕೊಳ್ಳಲಾರದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ರಾಜ್ಯ ಸರ್ಕಾರ ಈಗಾಗಲೇ ಕೋರ್ಟ್ ಆದೇಶವನ್ನು ಅನುಷ್ಠಾನಗೊಳಿಸಲು ಎಲ್ಲ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಆದ್ದರಿಂದ ಯಾವುದೇ ಕಟ್ಟಡ ಪರವಾನಗಿ, ಸಿಸಿ ಮತ್ತು ನಕ್ಷೆ ಮಂಜೂರಾತಿಯಲ್ಲಿ ದೋಷಗಳಿದ್ದರೆ, ಆ ಕಟ್ಟಡಗಳಿಗೆ ಯಾವುದೇ ರೀತಿಯ ವಿದ್ಯುತ್, ಕುಡಿಯುವ ನೀರು, ಒಳಚರಂಡಿ ಸಂಪರ್ಕ ಪಡೆದುಕೊಳ್ಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net