ರಂಗ ತರಬೇತಿ ಕೋರ್ಸ್‌ಗೆ ಆಸಕ್ತರಿಂದ ಅರ್ಜಿ ಆಹ್ವಾನ

Drama-games
Published on

ಮೈಸೂರು: ಅದಮ್ಯ ರಂಗಶಾಲೆಯಲ್ಲಿ ನ. 25ರಿಂದ ಎರಡು ತಿಂಗಳ ಅವಧಿಯ ವಾರಾಂತ್ಯ ಅಭಿನಯ ಕಾರ್ಯಾಗಾರ ಹಾಗೂ ರಂಗ ತರಬೇತಿ ಕೋರ್ಸ್ ಆರಂಭವಾಗಲಿದ್ದು, ರಂಗಾಸಕ್ತ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಶಾಲಾ ಪಠ್ಯಪುಸ್ತಕದಲ್ಲಿನ ವಸ್ತುವಿಷಯಗಳನ್ನು ಬೋಧಿಸಲು ಚಟುವಟಿಕೆಯುಕ್ತ ಕಲಿಕಾ ವಿಧಾನ ಅತ್ಯಂತ ಯಶಸ್ವಿದಾಯಕ. ಈ ಹಿನ್ನೆಲೆಯಲ್ಲಿಯೇ ಪಠ್ಯವಸ್ತು ಕಲಿಕೆಗೆ ನಾಟಕ ಅಥವಾ ರಂಗ ಮಾಧ್ಯಮವನ್ನು ಅಳವಡಿಸಲಾಗಿದೆ. ಇದು ಅತ್ಯಂತ ಪರಿಣಾಕಾರಿ ಕಲಿಕೆಯ ವಿಧಾನವಾಗಿದ್ದು, ಮಕ್ಕಳಿಗೆ ಅತ್ಯಂತ ಆಕರ್ಷಣೀಯವಾಗಿದೆ. ಅವರಲ್ಲಿ ಕಲಿಕಾಸಕ್ತಿಯ ಕೆರಳಿಸಿ, ಕಲಿಕಾ ವಿಷಯವನ್ನು ಮನೋ-ಅಂತರ್ಗತ ಮಾಡುವ ಅತ್ಯುತ್ತಮ ಮಾರ್ಗೋಪಾಯವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಇದಕ್ಕೆ ಪೂರಕವಾಗಿ ಅದಮ್ಯದ ಮುಂದಿನ ಭಾಗವಾಗಿ ಎರಡು ತಿಂಗಳ ಅವಧಿಯ ವಾರಾಂತ್ಯ ಮಕ್ಕಳ ಅಭಿನಯ ಮತ್ತು ರಂಗ ತರಬೇತಿ ಕಾರ್ಯಾಗಾರವನ್ನು ನ.25 ರಿಂದ ಜಯಲಕ್ಷ್ಮೀಪುರಂನ ಶ್ರಿ ಕುವೆಂಪು ರಂಗಮಂದಿರದಲ್ಲಿ ಸಂಘಟಿಸಲಿದೆ.


ಆಸಕ್ತ ಪಾಲಕರು ತಮ್ಮ ಮಕ್ಕಳನ್ನು ದಾಖಲಿಸಿ ಪ್ರವೇಶಾತಿಯನ್ನು ಪಡೆಯಬಹುದಾಗಿದೆ. ಅಭಿನಯ, ರಂಗ ಸಂಗೀತ, ಆಂಗಿಕ ಚಲನೆ, ಧ್ವನಿ ಬಳಕೆ ಮತ್ತು ಪರಿಷ್ಕರಣೆ, ಪ್ರಸಾದನ, ಬೆಳಕು, ರಂಗವಿನ್ಯಾಸ, ಪರಿಕರ ನಿರ್ಮಾಣ, ರಂಗ ಇತಿಹಾಸ, ನಾಟಕ ತಯಾರಿ, ನಾಟಕ ಪ್ರದರ್ಶನ ಸೇರಿದಂತೆ ರಂಗಭೂಮಿಯ ಮತ್ತು ಸಿನಿಮಾ ಮಾಧ್ಯಮದ ಬೇರೆ ಬೇರೆ ಆಯಾಮಗಳ ಕುರಿತು ಪರಿಚಯಾತ್ಮಕ ಪ್ರಾಯೋಗಿಕ ತರಗತಿಗಳು ನಡೆಯಲಿದ್ದು, ನುರಿತ ರಂಗಭೂಮಿಯ ಸಂಪನ್ಮೂಲ ಶಿಕ್ಷಕರು ತರಬೇತಿ ನೀಡಲಿದ್ದಾರೆ.

ಪ್ರತಿ ಶನಿವಾರ ಮತ್ತು ಭಾನುವಾರ ತರಗತಿ ನಡೆಯಲಿದೆ. ಶನಿವಾರ ಸಂಜೆ 5.30 ರಿಂದ 8.30 ರವರೆಗೂ, ಭಾನುವಾರ ಬೆಳಗ್ಗೆ 10 ರಿಂದ 2 ರವರೆಗೂ ತರಗತಿಗಳು ನಡೆಯಲಿವೆ. ಕಾರ್ಯಾಗಾರಕ್ಕೆ ಗರಿಷ್ಠ 25 ಮಂದಿ ಮಕ್ಕಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮಕ್ಕಳ ವಯೋಮಿತಿ 5 ವರ್ಷದಿಂದ 13 ವರ್ಷವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ ಚಂದ್ರು ಮಂಡ್ಯ (ಮೊ.8660103141) ಅವರನ್ನು ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net