

ನರಗುಂದ: ಪಟ್ಟಣದ ತಾಪಂ ಕಾರ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಜನಸ್ಪಂದನ ಸಭೆ ಗೊಂದಲದ ಗೂಡಾಗಿತ್ತು.
ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಸಭೆಗೆ ಒಂದು ಗಂಟೆ ತಡವಾಗಿ ಬಂದರು. ಸಭೆ ಪ್ರಾರಂಭಕ್ಕೂ ಮುಂಚೆಯೇ ವಿದ್ಯುತ್ ಕೈಕೊಟ್ಟಿದ್ದರಿಂದ ಮೈಕ್, ಗಾಳಿ, ಬೆಳಕಿನ ವ್ಯವಸ್ಥೆಯಿಲ್ಲದಂತಾಗಿತ್ತು. ಸ್ವೀಕೃತವಾದ ಅರ್ಜಿಗಳನ್ನು ಪರಿಶೀಲಿಸಿ, ಆಯಾ ಇಲಾಖೆ ಅಧಿಕಾರಿಗಳು ಇತ್ಯರ್ಥಪಡಿಸುವಂತೆ ಸೂಚಿಸಿ ಒಂದು ಗಂಟೆಯಲ್ಲಿಯೇ ಜಿಲ್ಲಾಧಿಕಾರಿಗಳು ಸಭೆಯಿಂದ ನಿರ್ಗಮಿಸಿದರು.
ಪ್ರತಿಕ್ರಿಯಿಸಿದ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಚ್.ಎಂ. ಖುದಾವಂದ, ಪಟ್ಟಣದ ಕೆಂಪಗೇರಿ ಕೆಇಬಿ ಗ್ರಿಡ್‌ನಲ್ಲಿರುವ ವಿದ್ಯುತ್ ಪರಿವರ್ತಕದಲ್ಲಿ ಏಕಾಏಕಿ ಸ್ಫೋಟವಾಗಿದ್ದರಿಂದ ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆಯಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಇತರ ಅಧಿಕಾರಿಗಳ ಮೊಬೈಲ್‌ಫೋನ್ ಟಾರ್ಚ್ ಬೆಳಕಿನಲ್ಲಿ ಸಾರ್ವಜನಿಕರ ಅರ್ಜಿ ಪರಿಶೀಲನೆಗೆ ಡಿಸಿ ಮುಂದಾದಾಗ, ರೈತರು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ಕುರುಗೋವಿನಕೊಪ್ಪ ಗ್ರಾಮದ ಎಲ್ಲ ರೈತರ ಪಹಣಿ ಪತ್ರಿಕೆಗಳಲ್ಲಿ ಹರಿದೀಕ್ಷಿತ್ ಇನಾಂದಾರ ಹಾಗೂ ಸರ್ಕಾರಿ ಎಂದು ಬರುತ್ತಿದೆ. ಇದರಿಂದ ರೈತರಿಗೆ ಸರ್ಕಾರದ ಸೌಲಭ್ಯ ಸಿಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು. ಪ್ರತಿಕ್ರಿಯಿಸಿದ ಡಿಸಿ, ಗ್ರಾಮದ ಯಾರಾದರೊಬ್ಬರು ಡಿಸಿ ಕಚೇರಿಗೆ ಆಗಮಿಸಿ ವಿವರಿಸಿದರೆ ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದರು.
ತಾಲೂಕಿನ ಹಿರೇಕೊಪ್ಪ ಗ್ರಾಮದ ಯಾವೊಬ್ಬ ರೈತನಿಗೂ 2023ನೇ ಸಾಲಿನ ಕಡಲೆ, ಜೋಳದ ಬೆಳೆ ವಿಮೆ ಪರಿಹಾರ ಬಂದಿಲ್ಲ. ಪರಿಹಾರ ವಿತರಣೆಯಲ್ಲಿ ಏಜೆಂಟರಿಂದ ಭ್ರಷ್ಟಾಚಾರ ನಡೆದಿದೆ ಎಂಬ ಗ್ರಾಮಸ್ಥರು ದೂರಿದರು. ಡಿಸಿ ಪ್ರತಿಕ್ರಿಯಿಸಿ, ಇನ್ಶೂರೆನ್ಸ್ ಕಂಪನಿ ಸಂಬಂಧಪಟ್ಟ ಅಧಿಕಾರಿಗಳ ಸಭೆಯನ್ನು ಶನಿವಾರ ಕರೆಯಲಾಗಿದೆ. ಈ ಬಗ್ಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದರು.
ಚಿಕ್ಕನರಗುಂದ ಭಾಗದ ಕಾಲುವೆಗಳಲ್ಲಿ ಹೂಳು ತೆಗೆಯುತ್ತಿಲ್ಲ. ನಿರ್ವಹಣೆ ಕೊರತೆಯಿಂದ ಜಮೀನುಗಳಿಗೆ ನೀರು ಬರುತ್ತಿಲ್ಲ. ನರಗುಂದದಿಂದ ವಿದ್ಯುತ್ ಪೂರೈಸಲು ಸಾಕಷ್ಟು ಸಲ ಮನವಿ ನೀಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಚಿಕ್ಕನರಗುಂದ ಗ್ರಾಪಂ ಮಾಜಿ ಅಧ್ಯಕ್ಷ ಮುತ್ತು ರಾಯರಡ್ಡಿ ದೂರಿದರು.
‘ಗಂಗಾಪೂರ ಗ್ರಾಮದ ರಸ್ತೆ ಮಧ್ಯೆ ಚರಂಡಿ ನೀರು ಹರಿಯುತ್ತಿದೆ. ಸಮರ್ಪಕ ರಸ್ತೆ ಸೇರಿ ಮೂಲಸೌಕರ್ಯ ಕಲ್ಪಿಸುವಂತೆ 2022ರಲ್ಲಿ ಹದಲಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಈಗ ಮತ್ತೆ ಕಾಟಾಚಾರಕ್ಕೆ ಸಭೆ ನಡೆಸುತ್ತಿದ್ದೀರಿ’ ಎಂದು ಗಂಗಾಪೂರದ ಶಂಕರಗೌಡ ಕಗಧಾಳ ಎಂಬುವರು ಜಿಲ್ಲಾಧಿಕಾರಿಗಳೊಂದಿಗೆ ವಾಗ್ವಾದ ಮಾಡಿದರು.
ಸರ್ಕಾರಿ ತಾಲೂಕಾಸ್ಪತ್ರೆಗೆ ಬರುವ ಹಾವು ಕಡಿತಕ್ಕೊಳಗಾದವರಿಗೆ ಔಷಧೋಪಚಾರ ಚಿಕಿತ್ಸೆ ನೀಡಲು ಕ್ರಮಕೈಗೊಳ್ಳಬೇಕು ಉರಗರಕ್ಷಕ ಬಿ.ಆರ್. ಸುರೇಬಾನ, ತಾಲೂಕಿನಲ್ಲಿ ಪಶು ಆಸ್ಪತ್ರೆಗೆ ವೈದ್ಯರು, ಸಿಬ್ಬಂದಿಯನ್ನು ನೇಮಿಸಬೇಕು ಎಂದು ರೈತ ವಿಠ್ಠಲ ಜಾಧವ, ಮಗ ಡಿಪ್ಲೊಮಾ ಪದವೀಧರನಾಗಿದ್ದು, ಕೆಲಸ ಕೊಡಿಸುವಂತೆ ಕಸಬಾ ಬಡಾವಣೆಯ ನಾರಾಯಣ ಬಡಿಗೇರ ಮನವಿ ಮಾಡಿದರು.
ಸರ್ಕಾರದಿಂದ ಬರ ಪರಿಹಾರ ಬಂದಿಲ್ಲ ಎಂದು ಪಟ್ಟಣದ ರೇಣುಕಾ ಭಜಂತ್ರಿ ಎಂಬುವವರು ಜಿಲ್ಲಾಧಿಕಾರಿ ಮುಂದೆ ಕಣ್ಣೀರಿಟ್ಟರು. ಪ್ರವಾಹದಿಂದ ಸಂಪೂರ್ಣ ಬಿದ್ದಿರುವ 3 ಮನೆಗಳಿಗೆ ಪರಿಹಾರ ನೀಡುತ್ತಿಲ್ಲ ಎಂದು ತಾಲೂಕಿನ ವಾಸನ ಶಿವಾನಂದ ಗಾಳೆಪ್ಪನವರ ಕುಟುಂಬಸ್ಥರು ದೂರಿದರು.
ಖಾಸಗಿ ಶಾಲೆಗೆ ಸೇರಿದ್ದ ಮೆಣಸಗಿ ಗ್ರಾಮದ ಶಶಿಧರ ಹಿರೇಗೌಡ್ರ ಎಂಬ ವಿದ್ಯಾರ್ಥಿ ಆಸೆಯಂತೆ ಸರ್ಕಾರಿ ಶಾಲೆಗೆ ಸೇರಲು ಬಿಇಒ ನೆರವಾದರು.
ಜಿಪಂ ಸಿಇಒ ಭರತ್ ಎಸ್, ಎಸ್ಪಿ ಬಿ.ಎಸ್. ನೇಮಗೌಡ, ಡಿವೈಎಸ್ಪಿ ಪ್ರಭುಗೌಡ ಕಿರೇದಳ್ಳಿ, ತಹಸೀಲ್ದಾರ್ ಶ್ರೀಶೈಲ ತಳವಾರ, ಪುರಸಭೆ ಮುಖ್ಯಾಧಿಕಾರಿ ಅಮಿತ್ ತಾರದಾಳೆ, ತಾಪಂ ಇಒ ಎಸ್.ಕೆ. ಇನಾಂದಾರ, ಸಂತೋಷ ಪಾಟೀಲ ಇತರರಿದ್ದರು.
ಸಭೆಯಲ್ಲಿ ಒಟ್ಟು 77 ಅರ್ಜಿಗಳು ಸ್ವೀಕೃತವಾಗಿವೆ. 12 ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಲಾಯಿತು. ಬಾಕಿ 65 ಅರ್ಜಿಗಳನ್ನು ಆಯಾ ಇಲಾಖೆ ಅಧಿಕಾರಿಗಳಿಗೆ ರವಾನಿಸಲಾಗಿದೆ. ಕೃಷಿ ಮತ್ತು ಕಂದಾಯ ಇಲಾಖೆಗೆ ಸಂಬಂಧಿಸಿ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾದವು.