

ಅಳವಂಡಿ: ಎಲ್ಲ ಇಲಾಖೆಗಳ ವಿವಿಧ ಯೋಜನೆಗಳು ಜನರಿಗೆ ತಲುಪುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕೆಂದು ಸಂಸದ ಕೆ.ರಾಜಶೇಖರ ಹಿಟ್ನಾಳ ಸೂಚಿಸಿದರು.
ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಕೇಂದ್ರ ಮತ್ತು ರಾಜ್ಯ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಉದ್ಘಾಟಿಸಿ ಮಾತನಾಡಿದರು. ಇಲಾಖೆವಾರು ಯೋಜನೆಗಳನ್ನು ಅರ್ಹರಿಗೆ ತಲುಪಿಸುವಲ್ಲಿ ಅಧಿಕಾರಿಗಳು ಶ್ರಮಿಸಬೇಕು. ಹಾಗೆಯೇ ವಿವಿಧ ಯೋಜನೆಗಳ ಅನುದಾನ ಬಳಕೆ ಮಾಡಿಕೊಂಡು ನಿಗದಿತ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಬೇಕು ಎಂದರು.
ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ. ನರೇಗಾ, ಪ್ರಧಾನಮಂತ್ರಿ ಆವಾಸ್, ಸ್ವಚ್ಛ ಭಾರತ ಮಿಷನ್, ಎನ್‌ಆರ್‌ಎಲ್ಎಂ ಸಂಜೀವಿನಿ ಯೋಜನೆಗಳಲ್ಲಿ ಜನರು ಪಾಲ್ಗೊಳ್ಳುವಂತೆ ಕ್ರಮವಹಿಸಿ. ಕೃಷಿ, ತೋಟಗಾರಿಕೆ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಹೆಚ್ಚು ಮಾಹಿತಿ ನೀಡಲು ಪ್ರಚಾರ ಕೈಗೊಳ್ಳಿ.
ಗ್ರಾಮದಲ್ಲಿ ಮೂಲಸೌಕರ್ಯಗಳ ಕಾಮಗಾರಿಗಳು ನರೇಗಾ ಯೋಜನೆ ಮಾರ್ಗಸೂಚಿ ಪ್ರಕಾರ ಅನುಷ್ಠಾನಗೊಳಿಸಲು ಅವಕಾಶವಿದ್ದಲ್ಲಿ ಮಾತ್ರ ಕೈಗೊಳ್ಳಬೇಕು. ಜೆಜೆಎಂ ಬಾಕಿ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಿಸಿದ ಗುತ್ತಿಗೆದಾರರಿಗೆ ನೋಟಿಸ್ ನೀಡುವಂತೆ ನಿರ್ದೇಶಿಸಿದರು.
ಪ್ರಸಕ್ತ ವರ್ಷದ ನರೇಗಾ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ, ಎನ್‌ಆರ್‌ಎಲ್ಎಂ ಸಂಜಿವಿನಿ, ಕೃಷಿ, ತೋಟಗಾರಿಕೆ, ಜೆಜೆಎಂ, ಗ್ರಾಮೀಣ ಕುಡಿವ ನೀರು ಇಲಾಖೆ ಅಧಿಕಾರಿಗಳು ಪ್ರಗತಿ ವರದಿಯನ್ನು ಸಭೆಯಲ್ಲಿ ಮಂಡಿಸಿದರು.
ಗ್ರಾಪಂ ಸದಸ್ಯರು ಗ್ರಾಮಕ್ಕೆ ಅವಶ್ಯವಿರುವ ಸೌಲಭ್ಯ, ಕಾಮಗಾರಿ ಕುರಿತು ಅರ್ಜಿ ಸಲ್ಲಿಸಿದರು.