ಬಿಬಿಎಂಪಿಯಿಂದ ಕಲ್ಯಾಣ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನ

bbmp office
Published on

ಬೆಂಗಳೂರು: ಬಿಬಿಎಂಪಿಯು 2024-25ನೇ ಸಾಲಿನ ಬಜೆಟ್ ಘೋಷಿತ ಕಲ್ಯಾಣ ಕಾರ್ಯಕ್ರಮಗಳನ್ನು ಲಾನುಭವಿಗಳಿಗೆ ವಿತರಿಸಲು ಆರ್ಥಿಕ ವರ್ಷದ ಕೊನೆಯಲ್ಲಿ ಅರ್ಜಿ ಆಹ್ವಾನಿಸಿದೆ.

ಪಾಲಿಕೆಯಲ್ಲಿ ಚುನಾಯಿತ ಆಡಳಿತ ಇಲ್ಲದಿರುವುದು ಹಾಗೂ ವಾರ್ಷಿಕ ಕ್ರಿಯಾ ಯೋಜನೆ ಅನ್ವಯ ಬಡಜನರಿಗೆ ಒದಗಿಸಬೇಕಿದ್ದ ವಿವಿಧ ಸವಲತ್ತು ಹಾಗೂ ಕಾರ್ಯಕ್ರಮಗಳಿಗೆ ಅಗತ್ಯ ಅನುದಾನ ನಿಗದಿಪಡಿಸುವುದು ವಿಳಂಬ ಆಗಿದ್ದರಿಂದ ಆಯವ್ಯಯ ಮಂಡನೆಯಾಗಿ 10 ತಿಂಗಳ ಬಳಿಕ ವಿತರಣೆಗೆ ಸಿದ್ಧತೆ ಆರಂಭಿಸಿದೆ.

ಕಲ್ಯಾಣ ಕಾರ್ಯಕ್ರಮಗಳಡಿ ಪಾಲಿಕೆ ವ್ಯಾಪ್ತಿಯ ಎಲ್ಲ ವರ್ಗಗಳ ಪೌರಕಾರ್ಮಿಕರು, ಪರಿಶಿಷ್ಟರು, ಆರ್ಥಿಕವಾಗಿ ಹಿಂದುಳಿದ ಮತ್ತು ಅಲ್ಪಸಂಖ್ಯಾತರು, ಅಂಗವಿಕಲರು, ತೃತೀಯ ಲಿಂಗಿಗಳು ಹಾಗೂ ಮಹಿಳಾ ವರ್ಗದ ಅರ್ಹ ಅಭ್ಯರ್ಥಿಗಳಿಂದ ಭೌತಿಕ ಹಾಗೂ ಅಂತರ್ಜಾಲ ತಂತ್ರಾಂಶದ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಇದಲ್ಲದೆ ಆರ್ಥಿಕ ಸಹಾಯ ಅಡಿಯಲ್ಲಿ ಕ್ರೀಡಾಪಡುಗಳಿಗೆ, ಸಣ್ಣ ಉದ್ಯಮ/ಸ್ವಯಂ ಉದ್ಯೋಗಕ್ಕೆ ಅಂಗವಿಕಲರಿಗೆ ಮೆಡಿಕಲ್ ಶಾಪ್/ಸ್ವಂತ ಸಣ್ಣ ಕೈಗಾರಿಕೆ ಘಟಕ ಸ್ಥಾಪನೆ, ಆಟೋ, ಕಾರು ಖರೀದಿಗೆ ಸಹಾಯಧನ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಟ್ ವಿತರಿಸಲಾಗುತ್ತದೆ.

ಅನುದಾನ ಆಧರಿಸಿ ಸೌಲಭ್ಯ:

ಪಾಲಿಕೆಯಲ್ಲಿ 2024-25ನೇ ಸಾಲಿಗೆ ಕಲ್ಯಾಣ ಕಾರ್ಯಕ್ರಮಗಳ ಜಾರಿಗೆ 337.23 ಕೋಟಿ ರೂ. ಕ್ರಿಯಾ ಯೋಜನೆ ರೂಪಿಸಿ ಸಿದ್ಧಪಡಿಸಲಾಗಿದೆ. ಆದರೀಗ, ಅನುದಾನ ಲಭ್ಯತೆ ಆಧರಿಸಿ ಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ಅರ್ಜಿ ಹಾಕಿದ ಎಲ್ಲ ಅರ್ಹರಿಗೂ ಸೌಲಭ್ಯ ಸಿಗುವುದು ಅನುಮಾನವಾಗಿದೆ. ಪಾಲಿಕೆಗೆ ಸರ್ಕಾರದಿಂದ ನಿರೀಕ್ಷಿತ ಅನುದಾನ ಬಾರದ ಕಾರಣ ವಿವಿಧ ಕಾರ್ಯಕ್ರಮಗಳ ಜಾರಿಗೆ ವಿಳಂಬವಾಗಿದೆ ಎಂಬ ಆಕ್ಷೇಪ ಕೇಳಿಬಂದಿದೆ.

ಅರ್ಜಿಯನ್ನು ಪಾಲಿಕೆಯ ವಲಯ ಜಂಟಿ ಆಯುಕ್ತರ ಕಚೇರಿಗಳಲ್ಲಿರುವ ಸಹಾಯಕ ಕಂದಾಯ ಅಧಿಕಾರಿ (ಕಲ್ಯಾಣ) ಕಚೇರಿಯಿಂದ ಪಡೆದು, ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಭೌತಿಕ ಅರ್ಜಿಗಳನ್ನು ಮುಂಬರುವ ಫೆ.4ರೊಳಗೆ ಸಲ್ಲಿಸಬಹುದು ಎಂದು ಪಾಲಿಕೆಯ ಕಲ್ಯಾಣ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

ಕಲ್ಯಾಣ ಕಾರ್ಯಕ್ರಮಗಳ ಪ್ರಮುಖಾಂಶ:

* ಒಂಟಿ ಮನೆ ನಿರ್ಮಾಣಕ್ಕೆ ನೆರವು

* ಶೈಕ್ಷಣಿಕ ಕಾರ್ಯಕ್ರಮದಡಿಯಲ್ಲಿ ಶಾಲಾ ಶುಲ್ಕ ಮರುಪಾವತಿ, ಉನ್ನತ ವ್ಯಾಸಂಗಕ್ಕೆ / ವಿದೇಶ ವ್ಯಾಸಂಗಕ್ಕಾಗಿ ಸಹಾಯಧನ

* ಆರೋಗ್ಯ ಕಾರ್ಯಕ್ರಮದಡಿ ಗಂಭೀರ ಸ್ವರೂಪ ಕಾಯಿಲೆಗಳಿಗೆ, ಹಿರಿಯ ನಾಗರಿಕರ ಆರೋಗ್ಯ ತಪಾಸಣೆ, ಅಂಗವೈಫಲ್ಯ ಸರಿಪಡಿಸುವ ಶಸ್ತ್ರಚಿಕಿತ್ಸೆ, ಅಂಗವಿಕಲರ ಫೀಜಿಯೋತೆರಫಿಗೆ ನೆರವು

* ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿರುವ/ನಡೆಸುವ ಸಂಘ-ಸಂಸ್ಥೆಗಳಿಗೆ, ಅಂಗವಿಕಲರ ಸಂಸ್ಥೆಗಳ ವಿದ್ಯಾಸಂಸ್ಥೆಗಳಿಗೆ ಆರ್ಥಿಕ ಸಹಾಯ.

* ಮಹಿಳಾ ಕಲ್ಯಾಣ ಕಾರ್ಯಕ್ರಮದಡಿ ತರಬೇತಿ ಪಡೆದವರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ

* ಅಂಗವಿಕಲರಿಗೆ ಹೆಚ್ಚುವರಿಯಾಗಿ ಅಳವಡಿಸಿರುವ ಉಚಿತ ದ್ವಿಚಕ್ರ ವಾಹನ ವಿತರಣೆ, ಎಲೆಕ್ಟ್ರಿಕಲ್ ವೀಲ್ಹ್ ಚೇರ್ ವಿತರಣೆ

* ಪರಿಶಿಷ್ಟರು, ಹಿಂದುಳಿದ, ಅಲ್ಪಸಂಖ್ಯಾತ ವರ್ಗದ ಬೀದಿ ಬದಿ ವ್ಯಾಪಾರಿಗಳಿಗೆ ಇ-ಮಾರಾಟ ವಾಹನ ಖರೀದಿಗೆ ಸಹಾಯಧನ ಶೇ.90 ಅಥವಾ 1.50 ಲಕ್ಷ ರೂ. ವರೆಗೆ ಸಹಾಯಧನ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net