

ಮಡಿಕೇರಿ: ಜವಾಹರ್ ನವೋದಯ ವಿದ್ಯಾಲಯ ೬ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ ಮಾಡಿದ್ದು, ೫ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮನವಿ ಮಾಡಿದರು.
ನಗರದ ಜಿ.ಪಂ.ಕೆಡಿಪಿ ಸಭಾಂಗಣದಲ್ಲಿ ಜವಾಹರ್ ನವೋದಯ ವಿದ್ಯಾಲಯ ೬ನೇ ತರಗತಿ ಪ್ರವೇಶ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೋದಯ ವಿದ್ಯಾಲಯ ಸರ್ಕಾರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶವಿದೆ. ಆದ್ದರಿಂದ ಈ ಪರೀಕ್ಷೆ ಬರೆಯಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕಿದ್ದು, ಅರ್ಜಿ ಸಲ್ಲಿಸಲು ಜ೩೧ ಕೊನೆಯ ದಿನವಾಗಿದೆ. ಈ ಅವಕಾಶವನ್ನು ೫ನೇ ತರಗತಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಬಳಸಿಕೊಳ್ಳುವಂತಾಗಬೇಕು. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಈಗಿನಿಂದಲೇ ಅಗತ್ಯ ತಯಾರಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಜವಾಹರ್ ನವೋದಯ ವಿದ್ಯಾಲಯ ಪ್ರವೇಶಕ್ಕೆ ಆಯಾಯ ಜಿಲ್ಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅವಕಾಶವಿದೆ. ಆ ನಿಟ್ಟಿನಲ್ಲಿ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದಲ್ಲಿರುವ ಜವಾಹರ್ ನವೋದಯ ವಿದ್ಯಾಲಯಕ್ಕೆ ೮೦ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿದ್ದು, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವಂತಾಗಬೇಕು ಎಂದು ಜಿಲ್ಲಾಧಿಕಾರಿ ಸಲಹೆ ಮಾಡಿದರು.
ಜವಾಹರ್ ನವೋದಯ ವಿದ್ಯಾಲಯ ೬ನೇ ತರಗತಿ ಪ್ರವೇಶ ಪರೀಕ್ಷೆ ಎದುರಿಸುವುದರಿಂದ, ಅಂಬೇಡ್ಕರ್, ಏಕಲವ್ಯ, ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಕನಕದಾಸ, ನಾರಾಯಣಗುರು ಹೀಗೆ ರಾಜ್ಯದ ಹಲವು ವಸತಿ ಶಾಲೆಗಳ ಪ್ರವೇಶಕ್ಕೂ ಅನುಕೂಲವಾಗಲಿದೆ. ಆ ನಿಟ್ಟಿನಲ್ಲಿ ಗ್ರಾಮೀಣ ಬಡ ವಿದ್ಯಾರ್ಥಿಗಳು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು. ಈಗಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದರಿಂದ ಭವಿಷ್ಯದಲ್ಲಿ ನೀಟ್, ಸಿಇಟಿ, ಜೆಇಇ ಹೀಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಹಕಾರಿಯಾಗಲಿದೆ ಎಂದು ಕಿವಿಮಾತು ಹೇಳಿದರು.
ಜವಾಹರ್ ನವೋದಯ ವಿದ್ಯಾಲಯ ೨೦೨೩-೨೪ನೇ ಸಾಲಿಗೆ ೬ನೇ ತರಗತಿ ಪ್ರವೇಶ ಪರೀಕ್ಷೆ ಏ೨೯ ರಂದು ನಡೆಯಲಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ದಿವ್ಯಾಂಗ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದಂತೆ ಮೀಸಲಾತಿ ಇದೆ. ಕನಿಷ್ಠ ೧/೩ ಸ್ಥಾನಗಳು ಬಾಲಕಿಯರಿಗೆ ಮೀಸಲಾಗಿದೆ. ಕನಿಷ್ಠ ೭೫ ಸ್ಥಾನಗಳನ್ನು ಆಯಾಯ ಜಿಲ್ಲೆಯ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನವೋದಯ ವಿದ್ಯಾಲಯದಲ್ಲಿ ಸಹ ಶಿಕ್ಷಣ ವಸತಿ ಶಾಲೆಗಳು, ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ವಸತಿ ನಿಲಯಗಳು, ಊಟ ಮತ್ತು ವಸತಿ ಸೌಲಭ್ಯ, ವಲಸೆ ನೀತಿಯ ಮುಖಾಂತರ ವಿಶಾಲ ಸಾಂಸ್ಕೃತಿಕ ವಿನಿಮಯ, ಕ್ರೀಡೆ ಮತ್ತು ಆಟೋಟಗಳಿಗೆ ಉತ್ತೇಜನ, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಎನ್‌ಎಸ್‌ಎಸ್ ಹೀಗೆ ಹಲವು ಸೌಲಭ್ಯ ಒಳಗೊಂಡಿದೆ ಎಂದು ವಿವರಿಸಿದರು.
ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲ ಪಂಕಜಾಕ್ಷನ್ ಮಾಹಿತಿ ನೀಡಿ, ನವೋದಯ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಜೆಇಇ ವಿಭಾಗದಲ್ಲಿ ಶೇ.೫೬.೬ ರಷ್ಟು, ನೀಟ್ ಪರೀಕ್ಷೆಯಲ್ಲಿ ಶೇ.೭೮ ರಷ್ಟು ಸಾಧನೆ ಮಾಡಿದ್ದಾರೆ. ಅರ್ಜಿದಾರರು ಕೊಡಗು ಜಿಲ್ಲೆಯವರಾಗಿರಬೇಕು. ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಯಲ್ಲಿ ಪ್ರಸ್ತುತ ೫ ನೇ ತರಗತಿಯಲ್ಲಿ ಓದುತ್ತಿರುವವರು ಅರ್ಜಿ ಸಲ್ಲಿಸಬಹುದು ಎಂದು ಪ್ರಾಂಶುಪಾಲರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶರವರು ಕರಪತ್ರಗಳನ್ನು ಬಿಡುಗಡೆಗೊಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಂಗಧಾಮಯ್ಯ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಎನ್.ಮಂಜುನಾಥ್, ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ದಿವಾಕರ ಇದ್ದರು.
ಏನೇನು ಬೇಕು?
ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಆಧಾರ್ ಕಾರ್ಡ್, ವಿದ್ಯಾರ್ಥಿ ಆಧಾರ್ ಕಾರ್ಡ್‌ಗೆ ಪೋನ್ ನಂಬರ್ ಲಿಂಕ್ ಆಗಿರಬೇಕು. ತಹಶೀಲ್ದಾರ್‌ರಿಂದ ವಾಸಸ್ಥಳ ದೃಢೀಕರಣ ಪತ್ರ ಪಡೆದಿರಬೇಕು. ವಿದ್ಯಾರ್ಥಿಯ ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು. ಆಧಾರ್ ಕಾರ್ಡ್‌ನಲ್ಲಿ ವಿದ್ಯಾರ್ಥಿಯ ಹೆಸರು, ತಂದೆಯ ಹೆಸರು, ಲಿಂಗ ಮತ್ತು ವಾಸಸ್ಥಳವು ಶಾಲಾ ರಿಜಿಸ್ಟ್ರನಲ್ಲಿರುವಂತೆ ನಮೂದಿಸಬೇಕು. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ https://navodaya.gov.in, https://navodaya.gov.in ಹಾಗೂ ಜವಾಹರ್ ನವೋದಯ ವಿದ್ಯಾಲಯದ ಕಚೇರಿ ಅಧೀಕ್ಷಕರಾದ ಕೆ.ರವಿ(೯೬೬೩೮೮೩೨೧೩), ದೈಹಿಕ ಶಿಕ್ಷಣ ಶಿಕ್ಷಕರಾದ ಅರುಣ್ ಕುಮಾರ್ (೯೯೦೧೪೨೩೨೭೩), ಜೆಎಸ್‌ಎ ಜನನಿ ಸಿ.ಆರ್.(೭೭೬೦೮೯೮೧೪೮) ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಾಂಶುಪಾಲ ಪಂಕಜಾಕ್ಷನ್ ಮಾಹಿತಿ ನೀಡಿದರು.