ಕೇಂದ್ರ ಪುರಸ್ಕೃತ ಯೋಜನೆಗಳ ಸಹಾಯಧನಕ್ಕೆ ಅರ್ಜಿ ಆಹ್ವಾನ

Published on

ಸೋಮವಾರಪೇಟೆ: 2023-24 ಸಾಲಿನ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪಿಎಂಕೆಎಸ್‌ವೈ)ಯಡಿಯಲ್ಲಿ ಪ್ರತಿ ಹನಿಗೆ ಅಧಿಕ ಬೆಳೆ ಕಾರ್ಯಕ್ರಮದಡಿ ಎಲ್ಲ ತೋಟಗಾರಿಕೆ ಬೆಳೆಗಳಿಗೆ (ಕಾಫಿ, ಟೀ, ರಬ್ಬರ್ ಹೊರತುಪಡಿಸಿ) ಹನಿ ನೀರಾವರಿ ಅಳವಡಿಕೆಗಾಗಿ ಗರಿಷ್ಠ 5 ಹೆ. ಪ್ರದೇಶದವರೆಗೆ ಸಹಾಯಧನ ನೀಡಲಾಗುವುದು ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಮಂಜುನಾಥ್ ಜೆ.ಶೆಟ್ಟಿ ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ 2 ಹೆಕ್ಟೇರ್ ಪ್ರದೇಶದವರೆಗೆ ಶೇ.90ರ ಸಹಾಯಧನ ಮತ್ತು ಇತರೆ ರೈತರಿಗೆ ಶೇ.75 ರ ಸಹಾಯಧನ ದೊರೆಯಲಿದೆ. 2 ಹೆಕ್ಟೇರ್‌ರಿಂದ 5 ಹೆಕ್ಟೇರ್ ಪ್ರದೇಶದವರೆಗೆ ಶೇ. 45ರ ಸಹಾಯಧನ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಖಾದ್ಯ ತೈಲ ಅಭಿಯಾನದಲ್ಲಿ ತಾಳೆ ಬೆಳೆಯನ್ನು ಇಲಾಖಾ ಪಾಲುದಾರಿಕೆ ಕಂಪನಿಯಾದ ಪತಂಜಲಿ ಫುಡ್ಸ್ ಕಂಪನಿಯೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದ್ದು, ತಾಳೆ ಹೊಸ ಪ್ರದೇಶ ವಿಸ್ತರಣೆಗೆ 20 ಸಾವಿರ ರೂ. ಸಹಾಯಧನ ಹಾಗೂ ಮೊದಲ ನಾಲ್ಕು ವರ್ಷದ ಪಾಲನೆಗಾಗಿ 5,500 ರೂ. ನಂತೆ ಪ್ರತಿ ಹೇಕ್ಟರ್‌ಗೆ ನೀಡಲಾಗುವುದು. ಜತೆಗೆ ತಾಳೆಯಲ್ಲಿ ಡೀಸೆಲ್ ಪಂಪ್‌ಸೆಟ್ ಖರೀದಿಗೆ, ಕಟಾವು ಯಂತ್ರ ಖರೀದಿಗೆ, ಸಹಾಯಧನ ನೀಡಲಾಗುತ್ತದೆ.

ಆಸಕ್ತ ರೈತರು ನಿಗದಿತ ಅರ್ಜಿ ನಮೂನೆ, ಪಹಣಿ, ಆಧಾರ್ ಕಾರ್ಡ್ ಹಾಗೂ ಮತ್ತಿತರ ದಾಖಲಾತಿಗಳೊಂದಿಗೆ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಲು ಕೋರಿದೆ. ಸಹಾಯಧನವನ್ನು ನಿಗದಿಪಡಿಸಿದ ಗುರಿಗೆ ಅನುಗುಣವಾಗಿ ಜೇಷ್ಠತಾ ಪಟ್ಟಿ ಆಧಾರದ ಮೇಲೆ ನೀಡಲಾಗುವುದು ಹಾಗೂ ಸರ್ಕಾರದ ನಿಯಮಾನುಸಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಅಲ್ಪಸಂಖ್ಯಾತರು, ಮಹಿಳೆಯರು, ಅಂಗವಿಕಲರಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net