

ಅಳವಂಡಿ: ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಕಡೆ ಹೆಚ್ಚು ಗಮನಹರಿಸಿದಾಗ ಮಾತ್ರ ಒಳ್ಳೆಯ ಹುದ್ದೆ ಪಡೆಯಲು ಸಾಧ್ಯ ಎಂದು ಮುಂಡರಗಿಯ ಕ.ರಾ. ಬೆಲ್ಲದ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎನ್. ಹನುಮಂತಪ್ಪ ಹೇಳಿದರು.
ಗ್ರಾಮದ ಶಿವಮೂರ್ತಿಸ್ವಾಮಿ ಇನಾಮದಾರ ಕಟ್ಟಿಮನಿ ಹಿರೇಮಠ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಂತರಿಕ ಗುಣಮಟ್ಟ ಭರವಸೆ ಕೋಶದಡಿ ಏರ್ಪಡಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರಾಜ್ಯಶಾಸ್ತ್ರದ ಮಹತ್ವ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಳ ಅಧ್ಯಯನ ಹಾಗೂ ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ಹೀಗಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ಶ್ರದ್ಧೆಯಿಂದ ತಯಾರಾದರೆ ಯಶಸ್ಸು ನಿಮ್ಮದಾಗುತ್ತದೆ. ಯಾವುದೇ ವಿಷಯದ ಅಧ್ಯಯನವನ್ನು ಆಳವಾಗಿ ಮಾಡಿದಾಗ ಗುರಿ ತಲುಪಲು ಸಾಧ್ಯ ಎಂದರು.
ಪ್ರಾಚಾರ್ಯ ಜಗದೀಶ ಆಲದಕಟ್ಟಿ ಮಾತನಾಡಿ, ಕಲಿಕಾ ಹಂತದಲ್ಲೇ ವಿದ್ಯಾರ್ಥಿಗಳು ಜ್ಞಾನವನ್ನು ಹೆಚ್ಚಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಐಕ್ಯೂಎಸಿ ಸಂಯೋಜಕ ಡಾ. ನಾಗರಾಜ ಹಾವಿನಾಳ, ಆಂತರಿಕ ಗುಣಮಟ್ಟ ಭರವಸೆ ಕೋಶ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಉಪನ್ಯಾಸಕರಾದ ಪ್ರದೀಪ ಪಲ್ಲೆದ, ವೆಂಕಟೇಶ, ಕೃಷ್ಣ, ಸಿದ್ದಪ್ಪ ಕಡ್ಲೆಕೊಪ್ಪ, ಇಬ್ರಾಹಿಂ ಸಾಬ ನದಾಫ್, ವಿನಾಯಕ ನಾಯಕ, ರಾಘವೇಂದ್ರ, ದೇವರಾಜ, ವೀರಯ್ಯ ಹಿರೇಮಠ, ಹಾಗೂ ವಿದ್ಯಾರ್ಥಿಗಳು, ಬೋದಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.