

ಸಿದ್ದಾಪುರ: ವಿಚಾರಣೆ ಪ್ರಾಧಿಕಾರದಿಂದ ಕರ್ನಾಟಕ ಅರಣ್ಯ ಕಾಯ್ದೆಯಡಿ ಅರಣ್ಯವಾಸಿಗಳಿಗೆ ಬಂದಿರುವ ನೋಟಿಸ್‌ಗೆ ತಕರಾರು ಮತ್ತು ವಿಚಾರಣೆ ಸ್ಥಗಿತಗೊಳಿಸುವಂತೆ ಅರಣ್ಯವಾಸಿಗಳು ಅರ್ಜಿ ಸಲ್ಲಿಸಿದರು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ನ್ಯಾಯಾಲಯ ಪ್ರಾಧಿಕಾರದ ಮುಖ್ಯಸ್ಥ ಪ್ರಮೀಣಕುಮಾರ ಬಸರೂರು ಅವರ ಕಲಾಪಕ್ಕೆ ಅರಣ್ಯವಾಸಿಗಳ ಪರವಾಗಿ ಹಾಜರಾಗಿ ಅರ್ಜಿಸಲ್ಲಿಸಿದ ನಂತರ ಬುಧವಾರ ಸುದ್ದಿಗಾರರರಿಗೆ ಮಾಹಿತಿ ನೀಡಿದರು.
ಅರಣ್ಯವಾಸಿಯ ಅರ್ಜಿಗೆ ಸಂಬಂಧಿಸಿ ಮಾನ್ಯತೆ ಮತ್ತು ಪರಿಶೀಲನಾ ಪ್ರಕ್ರಿಯೆ ಪೂರ್ಣ ಆಗುವವರೆಗೆ ಸಾಗುವಳಿ ಅರಣ್ಯ ಭೂಮಿಯಿಂದ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸತಕ್ಕದ್ದಲ್ಲ ಅಥವಾ ಹೊರಹಾಕತಕ್ಕದ್ದಲ್ಲ ಎಂಬ ಅಂಶ ಕಾನೂನಿನಲ್ಲಿ ಉಲ್ಲೇಖವಿದ್ದಾಗಲೂ ಅರಣ್ಯ ಇಲಾಖೆಯು ಒಕ್ಕಲೆಬ್ಬಿಸುವ ವಿಚಾರಣೆಗೆ ಸಲ್ಲಿಸಿದ ತಕರಾರಿನಲ್ಲಿ ಪ್ರಸ್ತಾಪಿಸಲಾಗಿದೆ. ಕಾನೂನು, ಸರ್ಕಾರದ ಆದೇಶ ಹೊರತಾಗಿಯೂ ಅರಣ್ಯ ಅಧಿಕಾರಿಗಳು, ಅರಣ್ಯವಾಸಿಗಳಿಗೆ ತೊಂದರೆ ನೀಡುವ ಕುರಿತು ಆಕ್ಷೇಪವ್ಯಕ್ತಪಡಿಸಿದರು.
ಅರಣ್ಯವಾಸಿಗಳಾದ ಮಂಜು ಕನ್ನಾ ನಾಯ್ಕ, ರಾಮಚಂದ್ರ ನಾಯ್ಕ, ಕನ್ನಾ ಪುಟ್ಟ ನಾಯ್ಕ, ಕನ್ನಾ ಮಾರ್ಯ ನಾಯ್ಕ ಬಿಲ್ಲುಮನೆ, ಗಣೇಶ ಮೊಗೇರ ಕಪ್ಪಿನಗಡ್ಡಿ, ಬೊಮ್ಮ ಗೌಡ ಕಿತ್ತೊಳಿ, ನಂದನ ಭಟ್ಟ ದೊಡ್ಮನೆ ಇತರರು ವಿಚಾರಣಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದರು.
ಕ್ಯಾದಗಿ ವಲಯ ಅರಣ್ಯ ಅಧಿಕಾರಿ ಗಿರೀಶ ನಾಯ್ಕ, ಸಿದ್ದಾಪುರ ವಲಯ ಅರಣ್ಯಾಧಿಕಾರಿ ಬಸವರಾಜ ಬೋಚಳ್ಳಿ ಉಪಸ್ಥಿತರಿದ್ದರು.