

ಹುಬ್ಬಳ್ಳಿ: ಡಿಸ್ಕವರಿ ಆಫ್ ಇಂಡಿಯಾ ಕೃತಿ ಬರೆದು ಜೈಲು ಸೇರಿದ್ದವರಿಗೆ ಅಂದು ಅತ್ಯಂತ ಕಾಳಜಿಯುತವಾಗಿ ಸೌಲಭ್ಯ ನೀಡಲಾಗಿತ್ತು. ಮೊದಲ ಸ್ವಾತಂತ್ರೃ ಸಂಗ್ರಾಮ ಕೃತಿ ಬರೆದ ವೀರ ಸಾವರ್ಕರ್ ಅವರನ್ನು ಕಾಲಾಪಾನಿ ಶಿಕ್ಷೆಗೆ ಗುರಿಪಡಿಸಲಾಗಿತ್ತು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿವರಿಸಿದರು.
ಕ್ಷಮತಾ ಸೇವಾ ಸಂಸ್ಥೆ, ರಂಗಭೂಮಿ ಟ್ರಸ್ಟ್ ಸಹಯೋಗದಲ್ಲಿ ನಗರದ ಗೋಕುಲ ಗಾರ್ಡನ್‌ನಲ್ಲಿ ಶನಿವಾರ ಏರ್ಪಡಿಸಿದ್ದ ‘ಕರಿನೀರ ವೀರ’ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಪ್ಪಟ ಸ್ವಾತಂತ್ರೃ ಸೇನಾನಿ ಸಾವರ್ಕರ್ ಅವರ ಕುರಿತು ಈಗ ಕಾಂಗ್ರೆಸ್‌ನವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಇಂದಿರಾಗಾಂಧಿ ಅವರು ಅಂದು ಸಾವರ್ಕರ್ ಬಗ್ಗೆ ಹೊಗಳಿದ್ದರು. ಅಂಚೆ ಚೀಟಿಯನ್ನೂ ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿತ್ತು. ಇದರ ಇತಿಹಾಸವನ್ನು ಓದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಬೇಕು. ತುಷ್ಟೀಕರಣ ರಾಜಕಾರಣವನ್ನು ಬಿಡಬೇಕು ಎಂದು ಮೂದಲಿಸಿದರು.
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದರ ಕುರಿತು ಎಫ್‌ಎಸ್‌ಎಲ್ ವರದಿ ಬಂದಿದೆ. ಇಂದಿಗೂ ಕ್ರಮವಾಗಿಲ್ಲ. ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಗೊಂಡಿದೆ. ಇದಕ್ಕೆಲ್ಲ ಕಾರಣ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿ. ಇವರಿಗೆ ನಾಚಿಕೆ, ಮಾನ-ಮರ್ಯಾದೆ ಇಲ್ಲ ಎಂದು ಕಿಡಿಯಾದರು. ನಂತರ ನಾಟಕ ಪ್ರದರ್ಶನಗೊಂಡಿತು.
ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಎಂಎಲ್‌ಸಿ ಪ್ರೊ.ಎಸ್.ವಿ. ಸಂಕನೂರ, ಮೇಯರ್ ವೀಣಾ ಬರದ್ವಾಡ, ಉಪ ಮೇಯರ್ ಸತೀಶ ಹಾನಗಲ್ಲ, ನಾಟಕ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಪ್ರಮುಖರಾದ ತಿಪ್ಪಣ್ಣ ಮಜ್ಜಗಿ, ಸಂತೋಷ ಚವ್ಹಾಣ, ಗೋವಿಂದ ಜೋಶಿ, ಸಂಜಯ ಕಪಟಕರ, ಶ್ರೀನಿವಾಸ ಶಾಸ್ತ್ರಿ, ಶಿವು ಮೆಣಸಿನಕಾಯಿ ಇತರರು ಇದ್ದರು.