

ವಿಜಯವಾಣಿ ಸುದ್ದಿಜಾಲ ಧಾರವಾಡ
ನ್ಯಾಯಾಲಯದ ಆದೇಶಕ್ಕೆ ತಲೆ ಬಾಗಲೇಬೇಕು. ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಶುಕ್ರವಾರ ಹಾಜರಾಗುತ್ತೇನೆ. ಕೆಲವರು ನನ್ನನ್ನು ಕಾಡುತ್ತಲೇ ಇದ್ದಾರೆ. ಕಷ್ಟದಲ್ಲಿ ಇರುವುದನ್ನು ನೋಡಿ ಖುಷಿ ಪಡುವವರಿಗಿಂತ ಹೆಚ್ಚು ಜನ ದುಃಖಿಸುತ್ತಿದ್ದಾರೆ ಎಂದು ಶಾಸಕ ವಿನಯ ಕುಲಕರ್ಣಿ ಭಾವುಕರಾಗಿ ಹೇಳಿದರು.
ಬೆಳಗಾವಿ ಜಿಲ್ಲೆ ಕಿತ್ತೂರಿನ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಪ್ಪು ಮಾಡದಿದ್ದರೂ ಕೆಲವರ ಷಡ್ಯಂತ್ರದಿ0ದ ಕ್ಷೇತ್ರಕ್ಕೆ ಕಾಲಿಡದಂತೆ ಅಸಹಾಯಕನಾಗಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.
* ಅಭಿವೃದ್ಧಿ ಕಾರ್ಯ ನಿಂತಿಲ್ಲ:
ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಪಾಲಿಕೆಯ ವಾರ್ಡ್ಗಳಲ್ಲಿ ಯುಜಿಡಿ ಸೌಲಭ್ಯಕ್ಕಾಗಿ 175 ಕೋಟಿ ರೂಪಾಯಿ ವೆಚ್ಚದ ಯೋಜನೆ ರೂಪಿಸಲಾಗಿತ್ತು. ಪಾಲಿಕೆಯಿಂದ ಅದಕ್ಕೆ ಅನುಮೋದನೆ ನೀಡಿ ಸರ್ಕಾರಕ್ಕೆ ಕಳುಹಿಸಲೂ ಅಡ್ಡಗಾಲು ಹಾಕಿದರು. ಆದಾಗ್ಯೂ 2 ವರ್ಷಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಾಗಿವೆ. ಪಾಲಿಕೆ ಅಧೀನದ ಮುನ್ಸಿಪಾಲಿಟಿ ಆಸ್ಪತ್ರೆಯನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಿ, ಸುಸಜ್ಜಿತ ಹೆರಿಗೆ ಹಾಗೂ ಮಕ್ಕಳ ಆಸ್ಪತ್ರೆ ಆರಂಭಿಸಸಲಾಗುವುದು. 25 ಕೋಟಿ ರೂ. ವೆಚ್ಚದಲ್ಲಿ ನಮ್ಮ ಹೊಲ ನಮ್ಮ ರಸ್ತೆಗಳ ಕಡೀಕರಣ, 35 ಕೋಟಿ ರೂ. ವೆಚ್ಚದ ಪಿಡಬ್ಲುಡಿ ರಸ್ತೆ, 18 ಕೋಟಿ ರೂ. ವೆಚ್ಚದ ಜಿ.ಪಂ. ರಸ್ತೆಗಳು ನಿರ್ಮಾಣವಾಗಿವೆ. ಹಾಸ್ಟೆಲ್‌ಗಳ ಸಮಸ್ಯೆ ನಿವಾರಣೆಗೆ 10 ಬಿಸಿಎಂ, 8 ಅಲ್ಪಸಂಖ್ಯಾತರ ಹಾಸ್ಟೆಲ್ ಮಂಜೂರು ಮಾಡಿಸಲಾಗಿದೆ. 126 ಶಾಲೆಗಳ ದುರಸ್ತಿ, 3.75 ಕೋಟಿ ರೂ. ವೆಚ್ಚದಲ್ಲಿ ನರೇಂದ್ರ ಕೆರೆ ಹಾಗೂ 3 ಕೋಟಿ ರೂ. ವೆಚ್ಚದಲ್ಲಿ ಬೇಲೂರು ಕೆರೆಗಳ ಅಭಿವೃದ್ಧಿ ಕಾರ್ಯ ನಡೆದಿದೆ ಎಂದರು.
ನಾನಿಲ್ಲದಿದ್ದರೂ ಪತ್ನಿ, ಪುತ್ರಿ, ಪಕ್ಷದ ಅಧ್ಯಕ್ಷರು, ಗ್ರಾಮ ಮಟ್ಟದಲ್ಲಿ ಮುಖಂಡರು ಮತ್ತು ಅಧಿಕಾರಿಗಳು ಜನರ ಆಶೋತ್ತರಗಳಿಗೆ ಸ್ಪಂದಿಸಲಿದ್ದಾರೆ ಎಂದರು.
ಶಿವಲೀಲಾ ಕುಲಕರ್ಣಿ, ಅರವಿಂದ ಏಗನಗೌಡರ, ಈಶ್ವರ ಶಿವಳ್ಳಿ, ಸಿದ್ದಣ್ಣ ಪ್ಯಾಟಿ, ಶಿವಾನಂದ ಮುತ್ತಣ್ಣವರ ಸುದ್ದಿಗೋಷ್ಠಿಯಲ್ಲಿದ್ದರು.