ವೈದ್ಯರ ವರದಿ ನಂತರ ನ್ಯಾಯಾಲಯಕ್ಕೆ ಹಾಜರು

new Girish New
Published on

ಹುಬ್ಬಳ್ಳಿ : ದಾವಣಗೆರೆಯಲ್ಲಿ ಗುರುವಾರ ತಡರಾತ್ರಿ ಬಂಧಿಸಿದ ಅಂಜಲಿ ಅಂಬಿಗೇರ ಕೊಲೆ ಆರೋಪಿ ವಿಶ್ವನಾಥ ಅಲಿಯಾಸ್ ಗಿರೀಶನನ್ನು ಶುಕ್ರವಾರ ಬೆಳಗ್ಗೆ ಹುಬ್ಬಳ್ಳಿಗೆ ಕರೆತರಲಾಗಿದೆ.

ಹತ್ಯೆ ಆರೋಪಿ ವಿಶ್ವನಾಥ ತೀವ್ರ ಗಾಯಗೊಂಡ ಹಿನ್ನೆಲೆಯಲ್ಲಿ ಇಲ್ಲಿನ ಕಿಮ್ಸ್​ನ ಕೈದಿಗಳ ಚಿಕಿತ್ಸಾ ಕೊಠಡಿಯಲ್ಲಿ ಇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇಲ್ಲಿಯ ವೀರಾಪೂರ ಓಣಿಯಲ್ಲಿ ಬುಧವಾರ ಬೆಳಗಿನಜಾವ ಮನೆಗೆ ನುಗ್ಗಿ ಅಂಜಲಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಗಿರೀಶ ಸಾವಂತನನ್ನು ದಾವಣಗೆರೆಯಲ್ಲಿ ಗುರುವಾರ ತಡರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದರು. ದಾವಣಗೆರೆಯಲ್ಲಿ ಪೊಲೀಸರು ವಶಕ್ಕೆ ಪಡೆದಿರುವ ಗಿರೀಶನ ತಲೆ ಹಾಗೂ ಮುಖಕ್ಕೆ ಗಂಭೀರ ಗಾಯಗಳಾಗಿವೆ. ಆರೋಪಿಗೆ ಚಿಕಿತ್ಸೆ ನೀಡುತ್ತಿರುವ ಕೊಠಡಿ ಸುತ್ತ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.

ಆರೋಪಿ ವಿಶ್ವನಾಥ ಅಲಿಯಾಸ್ ಗಿರೀಶ ಸಾವಂತನ ಆರೋಗ್ಯ ಸುಧಾರಣೆ ಕುರಿತು ವೈದ್ಯರು ವರದಿ ನೀಡಿದ ಬಳಿಕ ಆತನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ನಂತರ ಪೊಲೀಸ್ ಕಸ್ಟಡಿಗೆ ಪಡೆದು, ತನಿಖೆ ನಡೆಸಲಾಗುವುದು ಎಂದು ಶುಕ್ರವಾರ ಕಿಮ್ಸ್​ಗೆ ಭೇಟಿ ನೀಡಿದ್ದ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಆರೋಪಿ ರೈಲಿನಿಂದ ಬಿದ್ದ ಕಾರಣ, ತಲೆ ಮತ್ತು ಮುಖಕ್ಕೆ ಗಂಭೀರ ಗಾಯಗಳಾಗಿವೆ. ಸರಿಯಾಗಿ ಮಾತನಾಡುವ ಸ್ಥಿತಿಯಲ್ಲಿಯೂ ಇಲ್ಲ ಎಂದು ಹೇಳಿದರು.

ಆರೋಪಿಯು ಅಂಜಲಿಯನ್ನು ಪ್ರೀತಿಸುತ್ತಿದ್ದು, ಅವಳು ಅವನ ನಂಬರ್ ಬ್ಲಾಕ್ ಮಾಡಿದ್ದಳು ಎನ್ನುವ ಮಾಹಿತಿಯಿದೆ. ಆ ಕುರಿತು ಇಬ್ಬರ ಮೊಬೈಲ್ ನಂಬರ್​ಗಳನ್ನು ಸಿಡಿಆರ್​ನಲ್ಲಿ ಸಂಗ್ರಹಿಸಿ, ವೈಜ್ಞಾನಿಕ ತನಿಖೆ ಕೈಗೊಂಡು ಅಗತ್ಯ ಮಾಹಿತಿ ಸಂಗ್ರಹಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net