100 ಕೋಟಿ ರೂ ಅನುದಾನ ಬಿಡುಗಡೆ ಮಾಡಿ: ಕೇಂದ್ರ ಸಚಿವರಿಗೆ ಕೃಷಿ ಸಚಿವ ಚಲುವರಾಯಸ್ವಾಮಿ ಮನವಿ

2 (1)
Published on

ಮಂಡ್ಯ: ರಾಜ್ಯದ ಕೃಷಿ ವಿಶ್ವವಿದ್ಯಾನಿಲಯಗಳ ಬೋಧಕ ಸಿಬ್ಬಂದಿಗೆ ಯುಜಿಸಿ 7ನೇ ವೇತನದ ಬಾಕಿ ಮೊತ್ತ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

ದೆಹಲಿಯಲ್ಲಿ ಕೇಂದ್ರ ಖಾತೆ ರಾಜ್ಯ ಕೃಷಿ ಸಚಿವರಾದ ಶೋಭಾ ಕರಂದ್ಲಾಜೆ ಹಾಗೂ ಕೈಲಾಸ್ ಚೌಧರಿ ಅವರನ್ನು ಭೇಟಿ ಮಾಡಿ ಕೃಷಿ ಯೋಜನೆ ಹಾಗೂ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಬೇಕಾದ ಅನುದಾನದ ಬಗ್ಗೆ ಚರ್ಚೆ ನಡೆಸಿದ್ದಾರೆ. ಪ್ರಮುಖವಾಗಿ ರಾಜ್ಯದ ಎಲ್ಲ ಕೃಷಿ ವಿವಿಗಳಲ್ಲಿ ಬೋಧಕ ಸಿಬ್ಬಂದಿಗೆ ಯುಜಿಸಿ 7ನೇ ವೇತನ ಆಯೋಗವನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದೆ. ಅದರಂತೆ, ರಾಜ್ಯ ಸರ್ಕಾರ ಈಗಾಗಲೇ ಹಿಂದಿನ ವರ್ಷದಲ್ಲಿ 7ನೇ ವೇತನ ಆಯೋಗದ ಬಾಕಿ ಮೊತ್ತಕ್ಕೆ ಶೇ.50ರಷ್ಟು ಕೊಡುಗೆಯನ್ನು ಮಂಜೂರು ಮಾಡಿದೆ. ಆದರೆ ಕೇಂದ್ರ ಸರ್ಕಾರ ತನ್ನ ಶೇ.50ರಷ್ಟು ಪಾಲನ್ನು ಇನ್ನು ಪಾವತಿಸಲಾಗಿಲ್ಲ. ಇದು ಬಹಳ ಸಮಯದಿಂದ ಬಾಕಿ ಉಳಿದಿದೆ. ಈ ಬಗ್ಗೆ ಕ್ರಮ ವಹಿಸುವಂತೆ ಒತ್ತಾಯಿಸಿದ್ದಾರೆ.

ಇದಲ್ಲದೆ ಕರ್ನಾಟಕದ ಎಲ್ಲ ಫಾರ್ಮ್ ವಿಶ್ವವಿದ್ಯಾನಿಲಯಗಳು ಮಲ್ಟಿ ಮೀಡಿಯಾ ತರಗತಿ ಕೊಠಡಿ, ವಿಡಿಯೋ ಕಾನ್ಫರೆನ್ಸಿಂಗ್ ಸೇರಿದಂತೆ ಸುಧಾರಿತ ಮೂಲಸೌಕರ್ಯಗಳಿಲ್ಲದೇ ಬಳಲುತ್ತಿವೆ. ಕೇಂದ್ರ ಸರ್ಕಾರ ಹಾಗೂ ಐಸಿಎಆರ್ ಕೃಷಿ ವಿವಿಗಳನ್ನು ಉನ್ನತೀಕರಿಸಲು 100 ಕೋಟಿ ರೂ ಅನುದಾನ ಬಿಡುಗಡೆ ಮಾಡಬೇಕು. ಅಂತೆಯೇ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನೂತನ ಕೃಷಿ ಮಹಾವಿದ್ಯಾಲಯ ಸ್ಥಾಪನೆಗೆ ಬೇಡಿಕೆ ಇದ್ದು, ಇದಕ್ಕೆ ಸಂಬಂಧಿಸಿದಂತೆ ಹೊಸ ಕೃಷಿ ಕಾಲೇಜು ಸ್ಥಾಪಿಸಲು ರಾಜ್ಯ ಸರ್ಕಾರ ಈಗಾಗಲೇ ಭೂಮಿ ಮಂಜೂರು ಮಾಡಿದೆ. ಈ ನಿಟ್ಟಿನಲ್ಲಿ ಆಡಳಿತ ಭವನ, ವಿದ್ಯಾರ್ಥಿ ನಿಲಯ ಕಾಲೇಜು ಗ್ರಂಥಾಲಯ, ಅತ್ಯಾಧುನಿಕ ಪ್ರಯೋಗಾಲಯ, ಸ್ಮಾರ್ಟ್ ತರಗತಿ ಕೊಠಡಿ, ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ 400 ಕೋಟಿ ರೂ ಮಂಜೂರು ಮಾಡಿಕೊಡಬೇಕು. ಇದಲ್ಲದೆ ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ಅತ್ಯಾಧುನಿಕ ಪ್ರಯೋಗಾಲಯ, ಎಆರ್‌ವಿಆರ್ ತರಗತಿ ಕೊಠಡಿಗಳನ್ನು ಅಭಿವೃದ್ಧಿಪಡಿಸಲು ಮತ್ತು ಅದಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಆದ್ದರಿಂದ ಇದಕ್ಕಾಗಿ 108 ಕೋಟಿ ರೂ ಮಂಜೂರು ಮಾಡಲು ಮನವಿ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net