

ಹಾನಗಲ್ಲ: ರೈತರ ತೋಟ ಹಾಗೂ ಜಮೀನಿಗಳಲ್ಲಿನ ಕೊಳವೆಬಾವಿ ಸಂಪರ್ಕ ಸಾಮಗ್ರಿ ಹಾಗೂ ಕೃಷಿ ಸಾಮಗ್ರಿಗಳ ಕಳವು ಹೆಚ್ಚಿದ್ದು, ಕಳ್ಳರ ಜಾಲ ಪತ್ತೆ ಹಚ್ಚಿ ಶಿಕ್ಷೆಗೊಳಿಪಡಿಸಬೇಕು ಎಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ತಾಲೂಕು ಘಟಕದಿಂದ ಪಟ್ಟಣದಲ್ಲಿ ತಹಸೀಲ್ದಾರ್ ಎಸ್.ರೇಣುಕ ಅವರಿಗೆ ಮನವಿ ಸಲ್ಲಿಸಲಾಯಿತು.
ಕೊಳವೆಬಾವಿಯ ಮೋಟರ್ ಕೇಬಲ್, ಸ್ಟಾರ್ಟರ್ ಬಾಕ್ಸ್, ತುಂತುರು ನೀರಾವರಿ ಪೈಪ್ಗಳು, ಪಿವಿಸಿ ಪೈಪ್ ಸೇರಿದಂತೆ ಕೃಷಿ ಸಾಮಗ್ರಿ ಕಳವು ಅವ್ಯಾಹತವಾಗಿ ನಡೆದಿದೆ. ಒಂದು ಕೇಬಲ್ ಕಳವಿನಿಂದ ಹತ್ತಾರು ಸಾವಿರ ರೂಪಾಯಿ ನಷ್ಟವನ್ನು ಅನುಭವಿಸುವಂತಾಗಿದೆ. ಶೀಘ್ರ ಕಳ್ಳರ ಜಾಲ ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಮನವಿ ಮಾಡಿದರು.
ತಾಲೂಕು ಅಧ್ಯಕ್ಷ ಸದಾನಂದಗೌಡ್ರು ಪಾಟೀಲ, ಕೆ.ಟಿ. ಕಲಗೌಡ್ರ, ಗಂಗಾಧರ ಪ್ಯಾಟಿ, ಎಸ್.ಎಂ. ಕೋತಂಬರಿ, ಬಿ.ವಿ. ಪಾಟೀಲ, ಬಸವರಾಜ ಮುಸರಿ, ಎಫ್.ಜಿ. ಮತ್ತಿಗಟ್ಟಿ, ಗಣಪತಿ ದೇವಸೂರ, ಮಲಕಪ್ಪ ಕೋತಂಬರಿ, ರೈತರು ಇದ್ದರು.