

ಹನೂರು: ಪಟ್ಟಣ ವ್ಯಾಪ್ತಿಯ ಹುಲ್ಲೇಪುರದಲ್ಲಿ ಒತ್ತುವರಿಯಾಗಿರುವ ಸ್ವಾಮಿ ಹಳ್ಳ ಹಾಗೂ ಸರ್ಕಾರಿ ಜಾಗವನ್ನು ತೆರವುಗೊಳಿಸುವಂತೆ ಪಟ್ಟಣ ಪಂಚಾಯಿತಿ ಸದಸ್ಯ ಸುದೇಶ್ ತಹಸೀಲ್ದಾರ್ ವೈ.ಕೆ. ಗುರುಪ್ರಸಾದ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಸುದೇಶ್ ಮಾತನಾಡಿ, ಹುಲ್ಲೇಪುರ ಗ್ರಾಮದ ಸರ್ವೇ ನಂಬರ್ 155/ಬಿ 1ರಲ್ಲಿ 2.29 ಎಕರೆ ಸ್ವಾಮಿಹಳ್ಳ ಹಾಗೂ 1.55 ಎಕರೆ ಸರ್ಕಾರಿ ಜಾಗವಿದೆ. ಆದರೆ ಈ ಭಾಗವನ್ನು ಪಟ್ಟಣದ ಗೋಪಾಲನಾಯ್ಡು ಎಂಬುವರು ಅತಿಕ್ರಮಿಸಿ ಒತ್ತುವರಿ ಮಾಡಿಕೊಂಡಿದ್ದಾರೆ. ಜತೆಗೆ ಇಲ್ಲಿನ ಮಣ್ಣನ್ನು ಸ್ವಂತ ಜಮೀನಿಗೆ ಬಳಕೆ ಮಾಡಿಕೊಂಡಿದ್ದಾರೆ. ಒತ್ತುವರಿಯಿಂದಾಗಿ ಹಳ್ಳದಲ್ಲಿ ನೀರು ಹರಿಯುವ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಈ ಭಾಗದ ರೈತರು ಅಂತರ್ಜಲ ಸಮಸ್ಯೆಯನ್ನು ಎದುರಿಸುವಂತಾಗಿದೆ. ಸರ್ಕಾರಿ ಜಾಗ ಕಬಳಿಕೆಯಾಗಿರುವುದರಿಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಒತ್ತುವರಿಯನ್ನು ತೆರವುಗೊಳಿಸುವುದರ ಮೂಲಕ ರೈತರಿಗೆ ಅನುಕೂಲ ಕಲ್ಪಿಸಬೇಕು. ಜತೆಗೆ ಒತ್ತುವರಿದಾರರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು. ಇದಕ್ಕೆ ತಹಸೀಲ್ದಾರ್ ಅವರು ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ತಾಲೂಕು ಸಾರ್ವಜನಿಕ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ವಿನೋದ್‌ಕುಮಾರ್, ಮುಖಂಡ ಕಿರಣ್ ಹಾಗೂ ಇನ್ನಿತರರು ಇದ್ದರು.