

ಶಿವಮೊಗ್ಗ: ಹೊಸಮನೆ ಹಾಗೂ ಶರವತಿನಗರ ಬಡಾವಣೆಯ ರಸ್ತೆಗಳಿಗೆ ಹಂಪ್ಸ್ ನಿರ್ಮಿಸುವಂತೆ ಒತ್ತಾಯಿಸಿ ಮಹಾನಗರ ಪಾಲಿಕೆ ಮಾಜಿ ಸದಸ್ಯೆ ರೇಖಾ ರಂಗನಾಥ್ ನೇತೃತ್ವದಲ್ಲಿ ಸ್ಥಳೀಯರು ಆಯುಕ್ತ ಕೆ.ಮಾಯಣ್ಣಗೌಡ ಅವರಿಗೆ ಮನವಿ ಮಾಡಿದರು.
ಎರಡೂ ಬಡಾವಣೆಗಳ ರಸ್ತೆಗಳು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಸುಸಜ್ಜಿತವಾಗಿ ನಿರ್ಮಾಣವಾಗಿವೆ. ಆದರೆ ಕೆಲ ತಿಂಗಳ ಹಿಂದೆ ಹೊಸಮನೆ ಮತ್ತು ಶರಾವತಿನಗರಕ್ಕೆ ಹಾದು ಹೋಗುವ ಚಾನೆಲ್ ಪಕ್ಕದ ರಸ್ತೆ ನಾಗಪ್ಪ ದೇವಸ್ಥಾನದ ಹತ್ತಿರ ಎರಡು ಪ್ರತ್ಯೇಕ ಅಪಘಾತಗಳು ಸಂಭವಿಸಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಮತ್ತೊಬ್ಬ ಚಿಂತಾಜನಕ ಸ್ಥಿತಿಯಲ್ಲಿದ್ದಾನೆ. ಹಾಗಾಗಿ ವಾಹನಗಳ ವೇಗಕ್ಕೆ ಹಂಪ್ಸ್ ಮೂಲಕ ಕಡಿವಾಣ ಹಾಕಬೇಕಿದೆ ಎಂದರು.
ಹೊಸಮನೆ ಬಡಾವಣೆಯ 1ನೇ ಮುಖ್ಯರಸ್ತೆಯಿಂದ 6ನೇ ಮುಖ್ಯರಸ್ತೆವರೆಗೆ, ಲಕ್ಷ್ಮೀಟಾಕೀಸ್ ಚಿತ್ರಮಂದಿರದ ಹತ್ತಿರ ಚಾನೆಲ್ ಬಲಭಾಗದಿಂದ ಶರಾವತಿನಗರ ಚಾನಲ್ ಬ್ರಿಡ್ಜ್‌ವರೆಗಿರುವ ರಸ್ತೆ ಹಾಗೂ ಶರಾವತಿನಗರ ಆದಿಚುಂಚನಗಿರಿ ಶಾಲೆ ಹತ್ತಿರ, ಎ ಮತ್ತು ಬಿ ಬ್ಲಾಕ್‌ನ ಮುಖ್ಯರಸ್ತೆಗಳಿಗೆ ಕೂಡಲೇ ಪಾಲಿಕೆಯಿಂದ ವೈಜ್ಞಾನಿಕವಾಗಿ ಹಂಪ್ ನಿರ್ಮಿಸಿ ಅಪಘಾತ ತಡೆಗಟ್ಟಬೇಕೆಂದು ಮನವಿ ಮಾಡಿದರು.
ಹೊಸಮನೆ ವಾರ್ಡ್ ಅಧ್ಯಕ್ಷ ರಾಜೇಶ್ ಮಂದಾರ, ಪಂಚ ಗ್ಯಾರಂಟಿ ಪ್ರಾಧಿಕಾರದ ಸದಸ್ಯ ಬಸವರಾಜ್, ಸ್ಥಳೀಯರಾದ ಕೆ.ಎಲ್.ಪವನ್, ರಾಘವೇಂದ್ರ ರಾವ್, ಶ್ರೀಕಾಂತ್, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.