ಬೆಳೆ ಹಾನಿ ಪರಿಹಾರಕ್ಕೆ ಕಂದಾಯ, ಕೃಷಿ ಸಚಿವರಿಗೆ ಮನವಿ

C.C. PATIL.
Published on

ನರಗುಂದ: ತಾಲೂಕಿನ ರೈತರಿಗೆ ಕಳೆದ ವರ್ಷ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಸರಿಯಾಗಿ ಬೆಳೆ ಹಾನಿ ಪರಿಹಾರ ಕೊಟ್ಟಿಲ್ಲ. ಪ್ರಸಕ್ತ ಮುಂಗಾರು ಆರಂಭದಲ್ಲೇ ಧಾರಾಕಾರ ಮಳೆ ಹಾಗೂ ಬೆಣ್ಣೆಹಳ್ಳದ ಪ್ರವಾಹದಿಂದ ರೈತ ಕುಲ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಸೂಕ್ತ ಬೆಳೆ ಹಾನಿ ಪರಿಹಾರ ನೀಡುವಂತೆ ಕಂದಾಯ, ಕೃಷಿ ಇಲಾಖೆ ಸಚಿವರಿಗೆ ವೈಯಕ್ತಿಕವಾಗಿ ಮನವಿ ಮಾಡಲಾಗುವುದು ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರಗುಂದ, ನವಲಗುಂದ, ಕುಂದಗೋಳ ತಾಲೂಕಿನಾದ್ಯಂತ ಬುಧವಾರ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಬೆಣ್ಣೆಹಳ್ಳದ ಪ್ರವಾಹ ಸೃಷ್ಟಿಯಾಗಿದೆ. ಇದರಿಂದ ನರಗುಂದ ತಾಲೂಕಿನ ಬನಹಟ್ಟಿ, ಮೂಗನೂರ, ಕುರ್ಲಗೇರಿ, ಸುರಕೋಡ, ಹದ್ಲಿ, ಗಂಗಾಪೂರ, ಖಾನಾಪೂರ, ರೋಣ ತಾಲೂಕಿನ ಯಾವಗಲ್ಲ, ಮೆಣಸಗಿ ಸುತ್ತಮುತ್ತಲಿನ ಗ್ರಾಮಗಳ ರೈತರು ಜಮೀನಿನಲ್ಲಿ ಬೆಳೆದಿದ್ದ ಹೆಸರು, ಗೋವಿನಜೋಳ ಸಂಪೂರ್ಣ ಜಲಾವೃತಗೊಂಡಿವೆ. ಈ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀರಿ ಪರಿಶೀಲನೆ ನಡೆಸಿದ್ದೇನೆ. ಮಳೆ ನಿಂತ ತಕ್ಷಣವೇ ಎಲ್ಲ ಇಲಾಖೆ ಅಧಿಕಾರಿಗಳು ಬೆಳೆ ಹಾನಿ ನಿಖರ ಸಮೀಕ್ಷೆ ಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದ್ದೇನೆ. ಕ್ಷೇತ್ರದ ಕೆಲವೊಂದು ಶಾಲೆ, ಮನೆಗಳಿಗೆ ಹಾನಿಯಾಗಿದ್ದು, ಜೀವಹಾನಿ ಮುಂತಾದ ಪ್ರವಾಹ ಮುನ್ನೆಚ್ಚರಿಕೆ ಅವಘಡಗಳನ್ನು ನಿಯಂತ್ರಿಸುವಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಎರಡ್ಮೂರು ದಿನಗಳಲ್ಲಿ ಕಂದಾಯ ಸಚಿವರನ್ನು ಭೇಟಿಯಾಗಿ ರೈತರಿಗೆ ಸೂಕ್ತ ಬೆಳೆ ಹಾನಿ ಪರಿಹಾರ ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದರು.

ಸಂತಾಪ, ಕೇಂದ್ರ ಸರ್ಕಾರದಿಂದ ಕಾನೂನು ಕ್ರಮದ ಭರವಸೆ

ಭಾರತದ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ ಗುಜರಾತ್​ನ ಅಹಮದಾಬಾದ್​ನಲ್ಲಿ ಸಂಭವಿಸಿದೆ. ಏರ್ ಇಂಡಿಯಾ ದುರಂತದಲ್ಲಿ 169 ಭಾರತೀಯರು, 12 ಜನ ಸಿಬ್ಬಂದಿ, ವಿದೇಶಿಗರು ಸೇರಿ 230 ಪ್ರಯಾಣಿಕರು, ಹಾಸ್ಟೆಲ್ ವಿದ್ಯಾರ್ಥಿಗಳನ್ನು ಸೇರಿ ಒಟ್ಟು 247 ಮಂದಿ ದುರ್ಮರಣ ಹೊಂದಿದ ಕುಟುಂಬಸ್ಥರಿಗೆ ಸಂತಾಪ ವ್ಯಕ್ತಪಡಿಸುತ್ತೇನೆ. ಈ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರ ಮೇಲೆ ಕಾನೂನಿನ ಕ್ರಮ ಕೈಗೊಳ್ಳುವ ಭರವಸೆ ಇದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net