

ಹುಬ್ಬಳ್ಳಿ: ಬೆಳಗಾವಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪೊಲೀಸ್ ಅಧಿಕಾರಿಯನ್ನು ಏಕವಚನದಿಂದ ಅವಮಾನಿಸಿ ಹೊಡೆಯಲು ಹೋಗಿರುವುದು ಖಂಡನೀಯ. ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಜೈ ಭೀಮ್ ಯುವ ಸಂಘದ ಪದಾಧಿಕಾರಿಗಳು, ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ರವಾನಿಸಿದರು.
ಪ್ರತಿಭಟನೆಯಿಂದ ತಾಳ್ಮೆ ಕಳೆದುಕೊಂಡ ಸಿದ್ದರಾಮಯ್ಯ ಅವರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ ಅವರನ್ನು ವೇದಿಕೆ ಮೇಲೆ ಕರೆದು ಅವಮಾನಿಸಿದ್ದಾರೆ. ಅಲ್ಲದೇ ಕೈ ಎತ್ತಿ ಹೊಡೆಯಲು ಹೋಗಿದ್ದಾರೆ. ಪೊಲೀಸರ ನೈತಿಕ ಸ್ಥೈರ್ಯ ಕಸಿದಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿರುವವರಿಗೆ ತಾಳ್ಮೆ, ಸಂಯಮ ಅತ್ಯಗತ್ಯ. ಎರಡೂ ಇಲ್ಲದ ಅವರು ಅನಾಗರಿಕ ವರ್ತನೆ ಮಾಡಿದ್ದಾರೆ. ವಿಜಯಪುರದಲ್ಲಿಯೂ ಜಿಲ್ಲಾಧಿಕಾರಿಯನ್ನು ಅವಮಾನಿಸಿದ್ದರು. ಅಧಿಕಾರದ ದರ್ಪ ಸಿದ್ದರಾಮಯ್ಯ ಅವರಿಗಿದೆ. ಇದರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಕಳಂಕ ತಂದೊಡ್ಡಿದ್ದಾರೆ. ಕೂಡಲೇ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿದ ಮನವಿಯನ್ನು ತಹಸೀಲ್ದಾರ್ ಕಲಗೌಡ ಪಾಟೀಲ ಅವರ ಮೂಲಕ ರಾಜ್ಯಪಾಲರಿಗೆ ರವಾನಿಸಿದರು.
ಜಿಲ್ಲಾಧ್ಯಕ್ಷ ವಿಶ್ವನಾಥ ಬೂದುರ, ಮಹಾನಗರ ಅಧ್ಯಕ್ಷ ಪರಶುರಾಮ ಡಾವಣಗೆರೆ, ಉಪಾಧ್ಯಕ್ಷ ರಾಜು ತೇರದಾಳ, ಪ್ರಮುಖರಾದ ರಂಗನಾಯಕ ತಪೇಲ, ಮಂಜುನಾಥ ಕೊಂಡಪಲ್ಲಿ, ವಿಶಾಲ ಜಾಧವ, ಪರಶುರಾಮ ಜಾವೂರ, ಮಂಜುನಾಥ ಖಾನಾನ್, ಸಂಜು ಬಿಜಾಪುರ, ಮಂಜುನಾಥ ಕಾಂಬ್ಳೆ ಇತರರು ಇದ್ದರು.