

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರಾಥಮಿಕ ಶಾಲೆಯಲ್ಲಿ ವಿಷಯವಾರು ಶಿಕ್ಷಕ ಹಾಗೂ ತರಗತಿಗೊಬ್ಬ ಶಿಕ್ಷಕರಿದ್ದರೆ ಅತ್ಯುತ್ತಮ ಶಿಕ್ಷಣ ನೀಡುವುದರ ಜತೆಗೆ ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧಿಸಲು ಸಾಧ್ಯ ಎಂದು ದೆಹಲಿಯ ಎಐಪಿಟಿಎಫ್ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಅಭಿಪ್ರಾಯಪಟ್ಟರು.
ನಗರದ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಶಹರ ಘಟಕ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಶೈಕ್ಷಣಿಕ ಸಮಾವೇಶ ಹಾಗೂ ಪ್ರಶಸ್ತಿ ಪ್ರಧಾನ, ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕಲಿಕೆ ಕೆಲಸಕ್ಕಿಂತ ಶಿಕ್ಷಣೇತರ ಚಟುವಟಿಕೆಯಲ್ಲಿ ಹೆಚ್ಚು ಸಮಯ ವ್ಯರ್ಥವಾಗುತ್ತಿದ್ದು, ಶಿಕ್ಷಕರ ಮೇಲೆ ಒತ್ತಡ ಹೆಚ್ಚುತ್ತಿದೆ. ಶಾಲೆಗೆ ಆಗಮಿಸುವ ಮಕ್ಕಳಿಗೆ ಹಾಲು, ಮೊಟ್ಟೆ ಸೇರಿ ಪೌಷ್ಟಿಕಾಂಶ ವಿತರಣೆಯಲ್ಲಿ ನಿರತರಾಗುತ್ತಿದ್ದಾರೆ. ಭೋದಕೇತರ ಕೆಲಸ ಹೆಚ್ಚಾದರೆ ಮಕ್ಕಳಿಗೆ ಶಿಕ್ಷಣ ನೀಡಲು ಸಮಯವಿಲ್ಲದಂತಾಗುತ್ತದೆ. ಈ ನಿಟ್ಟಿನಲ್ಲಿ ಇಲಾಖೆಯು ಶಿಕ್ಷಕರಿಗೆ ಇತರ ಕೆಲಸ ನೀಡದೆ ಶಿಕ್ಷಣಕ್ಕೆ ಮಹತ್ವ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದರು.
ಡಿಡಿಪಿಐ ಎಸ್.ಎಸ್. ಕೆಳದಿಮಠ ಮಾತನಾಡಿದರು. ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ. ವೀಣಾ ಬಿರಾದಾರ ಉಪನ್ಯಾಸ ನೀಡಿದರು.
ಸಂಘದ ಶಹರ ಘಟಕದ ಅಧ್ಯಕ್ಷೆ ಶಾಂತಾ ಶೀಲವಂತ ಅಧ್ಯಕ್ಷತೆ ವಹಿಸಿದ್ದರು. ಡಯಟ್ ಪ್ರಾಚಾರ್ಯ ಜಯಶ್ರೀ ಕಾರೇಕರ, ನೌಕರ ಸಂಘದ ಅಧ್ಯಕ್ಷ ಎಸ್.ಎಫ್.ಸಿದ್ದನಗೌಡರ, ವೈ.ಎಚ್.ಬಣವಿ, ವಿ.ಎಫ್.ಚುಳಕಿ, ಅಶೋಕ ಸಿಂದಗಿ, ಮಂಜುನಾಥ ಅಡವೇರ, ರಾಜಶೇಖರ ಹೊನ್ನಪ್ಪನವರ, ಮಂಜುನಾಥ ಯಡಳ್ಳಿ, ವೀಣಾ ಹೊಸಮನಿ, ಇತರರು ಇದ್ದರು.
ಎಂ.ಆರ್.ಕಬ್ಬೇರ ಸ್ವಾಗತಿಸಿದರು. ರಮೇಶ ಲಿಂಗದಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.