ನಕಲಿ ದಾಖಲೆ ಸೃಷ್ಠಿಸಿ ವಂಚನೆ ಪ್ರಕರಣ, ಭೂ ಮಾಫಿಯಾ ಮಟ್ಟ ಹಾಕಲು ಸಿಎಂಗೆ ಮನವಿ

APPU PATTANASHETTI VISIT CM SIDDU
ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತುಕತೆ ನಡೆಸಿ ಭೂ ಮಾಫಿಯಾ ತಡೆಗೆ ಮನವಿ ಮಾಡಿದರು.
Published on

ವಿಜಯಪುರ: ನಕಲಿ ದಾಖಲೆ ಸೃಷ್ಠಿಸಿ ಭೂಮಿ ಕಬಳಿಸುತ್ತಿರುವ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೋರಾಟ ಮುಂದುವರಿಸಿದ್ದು, ರಾಜಧಾನಿಯಲ್ಲಿಯೇ ಬೀಡು ಬಿಟ್ಟು ಸಚಿವರು ಹಾಗೂ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತಿದ್ದಾರೆ.

ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರನ್ನು ಭೇಟಿ ಮಾಡಿ ಭೂ ಹಗರಣ ತಡೆಗೆ ಕ್ರಮ ಕೈಗೊಳ್ಳಲು ಮನವಿ ಮಾಡಿರುವ ಅವರು ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ಭೂ ಅಕ್ರಮ ಪ್ರಕರಣಗಳ ಕುರಿತು ಮುಖ್ಯಮಂತ್ರಿಗಳಿಗೆ ಸುದೀರ್ಘವಾಗಿ ವಿವರಿಸಿದರು.

ವಿಜಯಪುರ ನಗರ ಮತ್ತು ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ನಕಲಿ ಭೂದಾಖಲೆ ಸೃಷ್ಟಿಸಿ ಭೂಮಿ ಮತ್ತು ನಿವೇಶನ ಮಾರಾಟ ಮಾಡಿರುವ ನೂರಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಕೆಲವೊಂದು ಪ್ರಕರಣಗಳು ಮಾತ್ರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಇನ್ನೂ ಹಲವಾರು ಪ್ರಕರಣಗಳು ಇತ್ಯರ್ಥವಾಗದೆ ಉಳಿದಿವೆ. ಇಂತಹ ಪ್ರಕರಣಗಳಿಂದಾಗಿ ನೂರಾರು ಜನ ತಮ್ಮ ಜಮೀನು ಮತ್ತು ನಿವೇಶನಗಳು ಕಳೆದುಕೊಂಡಿದ್ದಾರೆ. ಇದರ ಹಿಂದೆ ವ್ಯವಸ್ಥಿತ ಜಾಲವೊಂದಿದೆ. ಹೀಗಾಗಿ ಯಾರೊಬ್ಬರ ಮೇಲೂ ಕ್ರಮಗಳಾಗುತ್ತಿಲ್ಲ. ಇನ್ನಾದರೂ ಈ ಪ್ರಕರಣಗಳಿಗೆ ಕಡಿವಾಣ ಹಾಕಲು ಸಿಐಡಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಸಾರ್ವಜನಿಕರು ಕಷ್ಟಪಟ್ಟು ಭೂಮಿ ಖರೀದಿಸುತ್ತಾರೆ. ಆದರೆ, ರಾತ್ರೋರಾತ್ರಿ ಅದು ಬೇರೆಯವರ ಹೆಸರಿಗೆ ನೋಂದಣಿಯಾಗಿರುತ್ತದೆ. ಇದರಲ್ಲಿ ಅಧಿಕಾರಿಗಳು ಮತ್ತು ದಂಧೆಕೋರರ ಕೈವಾಡವಿದೆ. ಹೀಗಾಗಿ ನೊಂದವರಿಗೆ ನ್ಯಾಯ ಕೊಡಿಸಲು ಮತ್ತು ಭವಿಷ್ಯದಲ್ಲಿ ಇಂಥ ಅಕ್ರಮ ಮರುಕಳಿಸದಂತೆ ಮಾಡಲು ಕ್ರಮ ಕೈಗೊಳ್ಳಬೇಕು. ಸಮಗ್ರ ತನಿಖೆಗಾಗಿ ಸಿಐಡಿ ನೇಮಕ ಮಾಡಬೇಕೆಂದು ಒತ್ತಾಯಿಸಿದರು.
ಬಿಜೆಪಿ ಮುಖಂಡ ಜಗದೀಶ ಮುಚ್ಚಂಡಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net