ಕಾರಂತ ಮುಂದುವರಿದ ಬಡಾವಣೆ ಪ್ರಸ್ತಾಪ ಕೈಬಿಡಲು ಸಿಎಂಗೆ ಮನವಿ

bda office
Published on

ಬೆಂಗಳೂರು: ಉದ್ದೇಶಿತ ಶಿವರಾಮ ಕಾರಂತ ಮುಂದುವರಿದ ಬಡಾವಣೆ ನಿರ್ಮಿಸುವ ಯೋಜನೆಯನ್ನು ಕೈಬಿಟ್ಟು ರೈತರಿಗೆ ಸಿಗಬೇಕಿರುವ ಪರಿಹಾರವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಅವರಿಗೆ ರೈತ ಮುಖಂಡರು ಮನವಿ ಮಾಡಿದ್ದಾರೆ.

ಹಾಲಿ ಚಾಲ್ತಿಯಲ್ಲಿರುವ ಕಾರಂತ ಲೇಔಟ್ ನಿರ್ಮಿಸಲು ದೊಡ್ಡ ಪ್ರಮಾಣದ ಕೃಷಿ ಜಮೀನನ್ನು ವಶಪಡಿಸಿಕೊಳ್ಳಲಾಗಿದೆ. ಆದರೂ, ಈವರೆಗೂ ರೈತರಿಗೆ ಪರಿಹಾರವನ್ನೇ ನೀಡಿಲ್ಲ. ಈಗ ಮತ್ತೆ 18 ಗ್ರಾಮಗಳಿಗೆ ಸೇರಿದ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲು ಬಿಡಿಎ ಮುಂದಾಗಿದೆ. ಈ ಹಿಂದಿನ ಬಡಾವಣೆಗಳನ್ನು ರಚಿಸಿ ಸಾರ್ವಜನಿಕರಿಗೆ ಸೈಟ್ ಹಂಚಿಕೆ ಪೂರ್ಣಗೊಂಡಿಲ್ಲ. ರೈತರಿಗೂ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಹೊಸ ಪ್ರಸ್ತಾಪವನ್ನು ಕೈಬಿಟ್ಟು ರೈತರ ಕೃಷಿ ಚಟುವಟಿಕೆಗೆ ಅವಕಾಶ ಮಾಡಿಕೊಡಬೇಕು ಎಂದು ಮುಖಂಡರು ಆಗ್ರಹಿಸಿದರು.

ಮುಂದುವರಿದ ಶಿವರಾಮ ಕಾರಂತ ಬಡಾವಣೆ ಯೋಜನೆಯನ್ನು ಕೈಬಿಡಬೇಕು, ಹಾಲಿ ಕಾರಂತ ಲೇಔಟ್‌ಗೆ ಜಮೀನು ಬಿಟ್ಟುಕೊಟ್ಟಿರುವ ರೈತರಿಗೆ ಶೇ.50 ಅಭಿವೃದ್ಧಿ ಪಡಿಸಿರುವ ನಿವೇಶನ, ಪಿಆರ್‌ಆರ್ ಸಂತ್ರಸ್ತ ರೈತರಿಗೆ 2013ರ ಭೂಸ್ವಾಧೀನ ಕಾಯ್ದೆಯಡಿ ಪರಿಹಾರ ವಿತರಣೆ ಹಾಗೂ ಕಾರಂತ ಯೋಜನೆ ವ್ಯಾಪ್ತಿಯ ಮೂಲ ಹಳ್ಳಿಗಳಿಗೆ ಲಿಂಕ್ ರಸ್ತೆಗಳನ್ನು ನಿರ್ಮಿಸಬೇಕು ಎಂಬ ಬೇಡಿಕೆಗಳ ಮನವಿಪತ್ರವನ್ನು ಸಿಎಂಗೆ ನೀಡಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ಬೆಂಗಳೂರು ಜಿಲ್ಲಾ ಸಮಿತಿಯ ಸಂಯೋಜಕ ಎಂ.ರಮೇಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net