ಅಮ್ಯೂಸ್‌ಮೆಂಟ್ ಪಾರ್ಕ್ ಕಾಮಗಾರಿ ಹಿಂಪಡೆಯಿರಿ

10BANNU2
ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘ ಮೂಲ ಸಂಘಟನೆಯ ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಶಿವರಾಂ, ವೆಂಕಟೇಶ್, ಶಾಂತರಾಜು, ರಂಗಸ್ವಾಮಿ, ಸ್ವಾಮಿರಾಜು, ಚಂದ್ರು, ಶಂಕರ್ ಇದ್ದರು.
Published on

ಬನ್ನೂರು: ವಿಶ್ವದ ಗಮನ ಸೆಳೆದಿರುವ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಪ್ರವಾಸೋದ್ಯಮದ ಹೆಸರಿನಲ್ಲಿ ಖಾಸಗಿಯವರಿಗೆ ಗುತ್ತಿಗೆ ನೀಡಲು ಸರ್ಕಾರ ನಿರ್ಧಾರ ಮಾಡಿರುವುದು ಸರಿಯಿಲ್ಲ. ಕೂಡಲೇ ಅಮ್ಯೂಸ್‌ಮೆಂಟ್ ಕಾಮಗಾರಿ ಹಿಂಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ(ಮೂಲಸಂಘಟನೆ) ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ಮನವಿ ಸಲ್ಲಿಸಿದರು.

ಹದಿನಾರು ಗ್ರಾಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ ಅವರು, ಬೃಂದಾವನವನ್ನು ಉನ್ನತೀಕರಣದ ಹೆಸರಿನಲ್ಲಿ ನಾಶಪಡಿಸುವ ಹುನ್ನಾರ ಇದಾಗಿದ್ದು, ಇದಕ್ಕೆ ರೈತಸಂಘ ಪ್ರಬಲ ವಿರೋಧವಿದೆ. ಭದ್ರತೆಯ ದೃಷ್ಟಿಯಿಂದ ಅಮ್ಯೂಸ್‌ಮೆಂಟ್ ಪಾರ್ಕ್ ಬದಲು ಹಾಲಿ ಅಣೆಕಟ್ಟಿಗೆ ಜೋಡಣೆಯ ಸಮಾಂತರ ಅಣೆಕಟ್ಟನ್ನು ತುರ್ತಾಗಿ ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಯೂರಿಯಾ ಕೃತಕ ಅಭಾವ ಸೃಷ್ಟಿಮಾಡಿ ರೈತರಿಗೆ ತೊಂದರೆ ನೀಡುತ್ತಿರುವ ಭ್ರಷ್ಟರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಬೇಕೆಂದು ಆಗ್ರಹಿಸಿದ ಅವರು, ಸೆಪ್ಟೆಂಬರ್ ತಿಂಗಳಿನಲ್ಲಿ ಕೃಷಿ ಚಟುವಟಿಕೆಗೆ ಬೇಕಾದ ಯೂರಿಯಾವನ್ನು ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಾಸ್ತಾನು ಮಾಡಿ, ರೈತರ ಕೈಗೆಟುಕುವ ಬೆಲೆಯಲ್ಲಿ ವಿತರಣೆ ಮಾಡುವಂತೆ ಕೋರಿದರು.

ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಅಕ್ರಮ ರೆಸಾರ್ಟ್‌ಗಳನ್ನು ನಿರ್ಮಿಸಿ, ಅರಣ್ಯ ಪ್ರದೇಶದಲ್ಲಿ ಮೋಜು ಮಸ್ತಿಯಲ್ಲಿ ಜನರು ನಿರತರಾಗುತ್ತಿದ್ದು, ಕಾಡಿನಲ್ಲಿ ವಾಸವಾಗಿರುವ ಪ್ರಾಣಿಗಳು ನಗರ ಪ್ರದೇಶದತ್ತ ಬರುತ್ತಿವೆ. ಇದರಿಂದ ಕಾಡು ಪ್ರಾಣಿಗಳು ರೈತರ ಬೆಳೆಯನ್ನು ಹಾಳು ಮಾಡುತ್ತಿವೆ. ಕೂಡಲೇ ರಾಜ್ಯ ಸರ್ಕಾರ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಶಿವರಾಂ, ವೆಂಕಟೇಶ್, ಶಾಂತರಾಜು, ರಂಗಸ್ವಾಮಿ, ಸ್ವಾಮಿರಾಜು, ಚಂದ್ರು, ಶಂಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net