

ಹುಬ್ಬಳ್ಳಿ: ಕೇಂದ್ರ ಗೃಹ ಸಚಿವರನ್ನು ಇತ್ತೀಚೆಗೆ ಭೇಟಿ ಮಾಡಿ, ರಾಜ್ಯದ ಪೊಲೀಸರಿಗೆ 5 ಸಾವಿರ ಮನೆ ಕೊಡುವಂತೆ ಬೇಡಿಕೆ ಇಟ್ಟಿದ್ದೇನೆ. ಅವರು ಕೊಡುವ ವಿಶ್ವಾಸವಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ತಿಳಿಸಿದರು.
ನಗರದಲ್ಲಿ ನೂತನ ಹುಬ್ಬಳ್ಳಿ ಗ್ರಾಮೀಣ ಠಾಣೆ, ಗೋಕುಲ ರೋಡ್ ಠಾಣೆ ಹಾಗೂ ವಿದ್ಯಾನಗರ ಠಾಣೆಗಳನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಎರಡು ಮುಖ್ಯ ಸವಾಲುಗಳಿವೆ. ಮೊದಲನೇಯದು ಸೈಬರ್ ವಂಚನೆ ಹಾಗೂ ಎರಡನೇಯದು ಡ್ರಗ್ಸ್. ಇವೆರಡನ್ನೂ ಮಟ್ಟ ಹಾಕಲು ಗೃಹ ಸಚಿವಾಲಯದಿಂದ ಸಮರ ಸಾರಲಾಗಿದೆ.
ಹು-ಧಾ ಅವಳಿ ನಗರ ಹಾಗೂ ಧಾರವಾಡ ಜಿಲ್ಲೆಯನ್ನು ಡ್ರಗ್ ಮುಕ್ತಗೊಳಿಸಲು ಟಾರ್ಗೆಟ್ ನೀಡುವೆ. ಈಗಾಗಲೇ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ ಕಾರ್ಯಪ್ರವೃತ್ತರಾಗಿದ್ದಾರೆ ಎಂದರು.
ಗೃಹ ಇಲಾಖೆಗೆ 2013ರಿಂದಲೇ ತಂತ್ರಜ್ಞಾನ ಟಚ್ ನೀಡಲಾಗಿದೆ. ಸ್ನೇಹಮಯಿ ವಾತಾವರಣ ಸೃಷ್ಟಿಸಲಾಗಿದೆ. ಇದರ ಮಧ್ಯೆ ತಂತ್ರಜ್ಞಾನ ಅಳವಡಿಕೆ ಮಾಡಲಾಗುತ್ತಿದೆ. 120 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಕೇಂದ್ರಿತವಾಗಿ ಕಂಟ್ರೋಲ್ ರೂಮ್ ಮಾಡಲಾಗುವುದು. ಇಲ್ಲಿಯೇ ಕುಳಿತು ರಾಜ್ಯದ ವಿವಿಧ ಭಾಗಗಳಿಂದ ಎಲ್ಲ ರೀತಿಯ ಮಾಹಿತಿ ಪಡೆಯಲು ಅನುಕೂಲವಾಗಲಿದೆ ಎಂದರು.
ರೈತರ ಮೇಲಿನ ಪ್ರಕರಣ ವಾಪಸ್ ಪಡೆಯಲು ಸಚಿವ ಸಂಪುಟದಲ್ಲಿ ಚರ್ಚೆ ಆಗಬೇಕು. ಈ ಪ್ರಕರಣಗಳ ಬಗೆಗೆ ನಾನು ಪರಿಶೀಲಿಸಿ ಸಂಪುಟದ ಮುಂದೆ ಇಡುತ್ತೇನೆ. ಒಪ್ಪಿಕೊಳ್ಳುವುದು ಬಿಡುವುದು ಸಂಪುಟಕ್ಕೆ ಬಿಟ್ಟಿದ್ದು. ಮಂಡಿಸುವ ಕೆಲಸ ಮಾತ್ರ ನನ್ನದು. ಹುಬ್ಬಳ್ಳಿ ಗ್ರಾಮೀಣ ಭಾಗಕ್ಕೆ ಡಿವೈಎಸ್‌ಪಿಯನ್ನು ನೇಮಿಸುವ ಭರವಸೆ ನೀಡಿದರು.
ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಗ್ರಾಮೀಣ ಭಾಗಕ್ಕೆ ಡಿವೈಎಸ್‌ಪಿ ನೇಮಕ ಮಾಡಬೇಕು. ಪೊಲೀಸ್ ವಾಹನ ಕೊಡಬೇಕು. ರೈತರ ಮೇಲಿನ ಪ್ರಕರಣ ವಾಪಸ್ ಪಡೆಯಬೇಕು ಎಂದು ವಿನಂತಿಸಿದರು.
ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಮಾತನಾಡಿ, ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿ ಸಂಖ್ಯೆ 1.10 ಲಕ್ಷ ಇದೆ. ಶೇ. 40ರಷ್ಟು ಮಾತ್ರ ಇವರಿಗೆ ಮನೆಗಳಿವೆ. 2020ರಲ್ಲಿ ಡಾ.ಜಿ. ಪರಮೇಶ್ವರ ಅವರು ಗೃಹ ಯೋಜನೆ ಜಾರಿಗೆ ತಂದರು. ಆಗಿನಿಂದ ಸಿಬ್ಬಂದಿಗೆ ಮನೆ ಕೊಡುವ ಕೆಲಸ ಆರಂಭವಾಗಿದೆ. 2025ರಲ್ಲಿ 10 ಸಾವಿರ ಮನೆ ಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, 2000 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಸೈಬರ್ ವಂಚನೆ ತಡೆಯಲು ಡಿವೈಎಸ್‌ಪಿ ಕೆಡರ್ ಅಧಿಕಾರಿಗಳನ್ನು ಕೊಟ್ಟಿದ್ದು, ಬಹಳಷ್ಟು ಸಿಬ್ಬಂದಿಗೆ ಬಡ್ತಿಯೂ ಸಿಕ್ಕಿದೆ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಸಭಾಪತಿ ಬಸವರಾಜ ಹೊರಟ್ಟಿ, ಎಂಎಲ್‌ಸಿ ಪ್ರದೀಪ ಶೆಟ್ಟರ್, ಮೇಯರ್ ರಾಮಪ್ಪ ಬಡಿಗೇರ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಐಜಿಪಿ ವಿಕಾಸ ಕುಮಾರ ವಿಕಾಸ, ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಪಂ ಸಿಇಒ ಟಿ.ಕೆ. ಸ್ವರೂಪ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಎಸ್‌ಪಿ ಡಾ. ಗೋಪಾಲ ಬ್ಯಾಕೋಡ, ಎಎಸ್‌ಪಿ ನಾರಾಯಣ ಬರಮನಿ ಇತರರು ಇದ್ದರು.