ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

mkg1a
Published on

ಜಗಳೂರು: ಅಡವಿರಾಮಜೋಗಿಹಳ್ಳಿಯಲ್ಲಿ ದಲಿತರ ಮೇಲೆ ನಡೆಸಿದ ಹಲ್ಲೆ ಮತ್ತು ಜಾತಿ ನಿಂದನೆ ಖಂಡಿಸಿ ಹಾಗೂ ಚಿತ್ರದುರ್ಗದ ಕವಾಡಿಗರಹಟ್ಟಿ ಕಲುಷಿತ ನೀರಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿ ಬುಧವಾರ ದಲಿತ ಸಂಘರ್ಷ ಸಮಿತಿ (ಪ್ರೊ. ಕೃಷ್ಣಪ್ಪ ಸ್ಥಾಪಿತ) ವತಿಯಿಂದ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮಂಜಾನಂದ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ದಸಂಸ ಸಂಚಾಲಕ ಮಲೆಮಾಚೀಕೆರೆ ಸತೀಶ್ ಮಾತನಾಡಿ, ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲೂಕು ಅಡವಿರಾಮಜೋಗಿಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರವಿರುವ ನಾಮಫಲಕ ಹಾಕಿದ್ದಕ್ಕೆ ವಿರೋಧಿಸಿ ಅನ್ಯ ಸಮುದಾಯದವರು ದಲಿತರ ಕೇರಿಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ 25ಕ್ಕೂ ಹೆಚ್ಚು ಹೆಣ್ಣುಮಕ್ಕಳು, 6 ಮಂದಿ ಪುರುಷರು ಗಾಯಗೊಂಡಿದ್ದಾರೆ. ಈ ರೀತಿಯ ವರ್ತನೆ ಖಂಡನಿಯ. ಇದಕ್ಕೆ ಕಾರಣರಾದವನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದ ವಿವಿಧ ಕಡೆ ನಿತ್ಯ ಒಂದಿಲ್ಲೊಂದು ರೀತಿ ದಲಿತರ ಮೇಲೆ ದೌರ್ಜನ್ಯ, ಹಲ್ಲೆ, ಕೊಲೆ ಪ್ರಕರಣಗಳು ನಡೆಯುತ್ತಿವೆ. ಅದನ್ನು ತಡೆಯುವ, ರಕ್ಷಣೆ ಮಾಡುವ ಕಾರ್ಯ ನಡೆಯುತ್ತಿಲ್ಲವೆಂದು ಪ್ರತಿಭಟನಾಕಾರರು ಅಧಿಕಾರಿಗಳ ವಿರುದ್ಧ್ದ ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಸಿ.ಎಂ. ಹೊಳೆ ಮಾರುತಿ ಮಾತನಾಡಿ, ಚಿತ್ರದುರ್ಗದ ಕವಾಡಿಗರಹಟ್ಟಿಯಲ್ಲಿ ಇತ್ತೀಚೆಗೆ ಕಲುಷಿತ ನೀರು ಸೇವನೆ ಘಟನೆಯಿಂದ ಏಳು ಜನ ಪ್ರಾಣ ಕಳೆದುಕೊಂಡಿದ್ದಾರೆ. 17ನೇ ವಾರ್ಡ್‌ನಲ್ಲಿ ಕಲುಷಿತ, ವಿಷಪೂರಿತ ನೀರನ್ನು ನಗರಸಭೆಯವರೇ ಪೂರೈಸಿದ್ದಾರೆ. ಪರಿಶಿಷ್ಠರು ಮತ್ತು ಸವರ್ಣೀಯರ ನಡುವಿನ ಘರ್ಷಣೆಯ ವೈಷಮ್ಯವೇ ಈ ಘಟನೆಗೆ ಕಾರಣ. ಆದ್ದರಿಂದ ಜಿಲ್ಲಾಡಳಿತ ನಿರ್ಲಕ್ಷೃ ವಹಿಸದೆ ಪ್ರಕರಣವನ್ನು ಸಿಬಿಐ ಅಥವಾ ಸಿಓಡಿ ತನಿಖೆಗೆ ವಹಿಸಬೇಕು. ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದಸಂಸ ಮುಖಂಡರಾದ ಹನುಮಂತಪ್ಪ, ಬೈರಾನಾಯಕನಹಳ್ಳಿ ಚೌಡಪ್ಪ, ಉಮೇಶ್, ಸಣ್ಣನಾಗಪ್ಪ, ಅಸಗೋಡು ಪರಶುರಾಮ, ಬಿ.ಆರ್. ರವಿಚಂದ್ರ, ಎಸ್. ರವಿ, ಗೌರಮ್ಮನಹಳ್ಳಿ ವೆಂಕಟೇಶ್, ಶಿವು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net