

ಮಂಡ್ಯ: ತೆಂಗು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ನಗರದ ಸೋಮವಾರ ಸಂಸದರ ಆಪ್ತ ಕಾರ್ಯದರ್ಶಿ ಶ್ರೀನಿವಾಸ ಭಟ್‌ಗೆ ಮನವಿ ಸಲ್ಲಿಸಿದರು.
ಸಂಸದರ ಕಚೇರಿಗೆ ಆಗಮಿಸಿದ ರೈತ, ದಲಿತ, ವಿದ್ಯಾರ್ಥಿ, ಯುವಜನ, ಮಹಿಳಾ, ಕನ್ನಡಪರ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು, ಕೊಬ್ಬರಿಗೆ ಪ್ರತಿ ಕ್ವಿಂಟಾಲ್‌ಗೆ 20 ಸಾವಿರ ರೂ ಬೆಂಬಲ ಬೆಲೆ(ಎಂಎಸ್‌ಪಿ) ನಿಗದಿಪಡಿಸುವುದರ ಜತೆಗೆ ಅದನ್ನು ಕಾನೂನು ಬದ್ಧಗೊಳಿಸಬೇಕು. ಎಳನೀರು ಮತ್ತು ತೆಂಗಿನಕಾಯಿಗೂ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಬೇಕು. ಪ್ರಮಾಣ ಮಿತಿ ವಿಧಿಸದೇ ತೆಂಗಿನ ಉತ್ಪನ್ನವನ್ನು ಸಂಪೂರ್ಣವಾಗಿ ಖರೀದಿಸಬೇಕು. ಅದಕ್ಕೆ ಅವಶ್ಯಕತೆಯಿರುವ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಮುಕ್ತ ಮಾರುಕಟ್ಟೆಯಡಿಯಲ್ಲಿ ತೆಂಗಿನ ಉತ್ಪನ್ನ ಮತ್ತು ಖಾದ್ಯ ತೈಲ ಆಮದನ್ನು ಕೂಡಲೇ ನಿಲ್ಲಿಸಬೇಕು. ಕೇಂದ್ರ ಸರ್ಕಾರದ ಎಣ್ಣೆ ಉಪಯೋಗಿಸುವ ಕಾರ್ಖಾನೆಗಳು ಹಾಗೂ ಸಂಸ್ಥೆಗಳು ತೆಂಗಿನ ಎಣ್ಣೆಯನ್ನು ಉಪಯೋಗಿಸಬೇಕು. ಪೂರ್ಣಪ್ರಮಾಣದ ಖರೀದಿಯನ್ನು ದಾಸ್ತಾನು ಮಾಡಲು ಬೃಹತ್ ಗೋಡೌನ್‌ಗಳನ್ನು ಮತ್ತು ಬಹಳಕಾಲ ಕಾಪಾಡಲು ಶಿಥಿಲೀಕರಣ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಖರೀದಿ ಕೇಂದ್ರವನ್ನು ವರ್ಷವಿಡೀ ತೆರೆದು ನಿರಂತರವಾಗಿ ಕೊಬ್ಬರಿಯನ್ನು ಖರೀದಿಸಬೇಕು. ಅದಕ್ಕೆ ತಕ್ಕಂತೆ ಮಾರ್ಗಸೂಚಿ ರೂಪಿಸಬೇಕು. ಜೀವ ಪರಿಸರಾತ್ಮಕ ವಾಯುಗುಣ ವೈಪರೀತ್ಯ ಕೃಷಿ ಪದ್ಧತಿಯನ್ನು ರೂಪಿಸಿ ಜಾರಿಗೊಳಿಸಬೇಕು. ಎಲ್ಲ ರೈತರ ಬೆಳೆಗಳಿಗೂ ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡಬೇಕು. ಮೌಲ್ಯವರ್ಧಿತ ತೆಂಗಿನ ಉತ್ಪನ್ನಗಳಾದ ನಾರು, ಚಿಪ್ಪು, ನೀರಾ, ಇದ್ದಿಲು, ಎಳನೀರು, ತಿರುಳು, ಮರ, ಗರಿಗಳನ್ನು ತಯಾರಿಸುವ ಕಾರ್ಖಾನೆಗಳಿಗೆ ಪ್ರೋತ್ಸಾಹ ಕೊಡಬೇಕು. ಜತೆಗೆ ಅದನ್ನು ಮಾರುಕಟ್ಟೆ ಮಾಡಬೇಕು ಎಂದು ಮನವಿ ಮಾಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಎನ್.ಎಲ್.ಭರತ್‌ರಾಜ್, ಟಿ.ಎಲ್.ಕೃಷ್ಣೇಗೌಡ, ಸಿದ್ದರಾಜು, ಲತಾ ಶಂಕರ್, ರವಿಕುಮಾರ್, ನಾಗರಾಜು, ಚಲುವರಾಜು, ಶಿವಳ್ಳಿ ಚಂದ್ರು, ಎಂ.ಎಸ್.ವಿಜಯ್‌ಕುಮಾರ್ ಇತರರಿದ್ದರು.