

ಕುಮಟಾ: ತಾಲೂಕಿನಲ್ಲಿ ಕಳೆದ ಕೆಲ ತಿಂಗಳಿನಿಂದ ಮರಳು ಅಲಭ್ಯತೆಯಿಂದ ದುರಸ್ತಿ ಹಾಗೂ ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಂಡಿರುವುದರಿಂದ ಮರಳುಗಾರಿಕೆ ಹಾಗೂ ಸಂಬಂಧಿತ ಕೆಲಸಗಳನ್ನೇ ನಂಬಿ ಬದುಕು ಸಾಗಿಸುತ್ತಿರುವ ಕೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ತಕ್ಷಣ ಮರಳುಗಾರಿಕೆ ಪುನರಾರಂಭಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮರಳು ಕಾರ್ಮಿಕರು ಶಾಸಕ ದಿನಕರ ಶೆಟ್ಟಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಕಳೆದ ಹಲವಾರು ತಿಂಗಳಿನಿಂದ ಇಡೀ ಜಿಲ್ಲೆಯಲ್ಲಿ ಮರಳುಗಾರಿಕೆ ಸ್ಥಗಿತವಾಗಿದೆ. ಇದರಿಂದಾಗಿ ಯಾವುದೇ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ನದಿ ಪಾತ್ರಗಳಲ್ಲಿ ವಾಸಿಸುವ ಸಾವಿರಾರು ಬಡ ಕೂಲಿಕಾರರು ಇದೇ ಉದ್ಯಮವನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಈಗ ಏಕಾಏಕಿ ಮರಳುಗಾರಿಕೆ ಸ್ಥಗಿತಗೊಳಿಸಿ ಕಾರ್ಮಿಕರ ಬದುಕಿನ ಮೇಲೆ ಬರೆ ಎಳೆದಿದ್ದಾರೆ. ನದಿಯಲ್ಲಿ ಹೂಳು ತುಂಬಿ ಮೀನುಗಾರಿಕೆಗೂ ತೊಂದರೆಯಾಗಿದೆ. ಕೂಡಲೇ ಸರ್ಕಾರದ ಮೇಲೆ ಒತ್ತಡ ತಂದು ನಿಯಮಾನುಸಾರ ಮರಳುಗಾರಿಕೆ ಆರಂಭವಾಗುವಂತೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಗಣೇಶ ಅಂಬಿಗ, ಲಕ್ಷ್ಮಣ ಅಂಬಿಗ, ಅಣ್ಣಪ್ಪ ನಾಯ್ಕ, ಗಣೇಶ ಚಂದನ, ನಾಗೇಶ ನಾಯ್ಕ, ಜಗದೀಶ, ಆನಂದ ನಾಯ್ಕ, ಅಭಿಷೇಕ ಭಂಡಾರಿ, ಗೌರೀಶ ಪಟಗಾರ, ಸುಬ್ಬು ನಾಯ್ಕ, ವೆಂಕಟ್ರಮಣ ಅಂಬಿಗ, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಮಂಡಲಾಧ್ಯಕ್ಷ ಜಿ.ಐ. ಹೆಗಡೆ ಇತರರು ಇದ್ದರು.